ಪೆರ್ಲ: ಕೋವಿಡ್ 19 ನಿಯಂತ್ರಣ ಭಾಗವಾಗಿ ಮುಚ್ಚಲ್ಪಟ್ಟ ಗಡಿಪ್ರದೇಶದಲ್ಲಿರುವ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮಕೈಗೊಂಡಿದೆ.ಹೈಕೋರ್ಟ್ ಮೆಟ್ಟಿಲೇರಿದ ಗಡಿ ಪ್ರದೇಶದ ಜನರ ಸಂಚಾರ ಸಮಸ್ಯೆಯು ಈ ಮೂಲಕ ಸುಖಾಂತ್ಯ ಗೊಳ್ಳುಲಿದೆಯೆಂದು ನಿರೀಕ್ಷಿಸಲಾಗಿದೆ. ಕೇಂದ್ರ ಸರಕಾರವು ಅಂತರಾಜ್ಯ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದರೂ ಕರ್ನಾಟಕ ಸರಕಾರ ಮಾತ್ರ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.ಇದರಿಂದಾಗಿ ಎಣ್ಮಕಜೆ ಪಂಚಾಯತಿಗೊಳಪಟ್ಟ ಸಾಯ,ಚವರ್ಕಾಡ್ ಪ್ರದೇಶದ ಜನರಿಗೆ ತುರ್ತು ಅಗತ್ಯಕ್ಕಾಗಿ ಕೇರಳಕ್ಕೆ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದರೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಯಾವುದೇ ಕ್ರಮಕೈಗೊಳ್ಳದೆ ನಕಾರಾತ್ಮಕ ನಿಲುವನ್ನು ತಾಳಿತು. ಇದರ ವಿರುದ್ಧ ರಾಧಾಕೃಷ್ಣ ನಾಯಕ್ ಶೇಣಿ, ಪಂಚಾಯತ್ ಮಾಜಿ ಅಧ್ಯಕ್ಷ ಸೋಮಶೇಖರ ಜೆ ಎಸ್,ಪಂಚಾಯತ್ ಸದಸ್ಯ ಐತ್ತಪ್ಪ ಕುಲಾಲ್ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಗಡಿನಾಡಿನ ಜನರಿಗೆ ಸಂಚಾರ ಅವಕಾಶ ಕಲ್ಪಿಸುವಂತೆ ಒತ್ತಾಯಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕರ್ನಾಟಕ ಸರಕಾರಕ್ಕೂ,ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೂ ಇದರ ಬಗ್ಗೆ ವಿವರಣೆ ನೀಡುವಂತೆ ನೋಟೀಸ್ ಜ್ಯಾರಿಮಾಡಿತ್ತು. ಈ ಬಗ್ಗೆ ವಿವರಣೆ ನೀಡಿದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೇರಳ ಭಾಗದ ಜನರಿಗೆ ತಲಪ್ಪಾಡಿ ಚೆಕ್ ಪೋಸ್ಟ್ ಹಾಗೂ ಜಾಲ್ಸೂರು ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು ಆದರಿಂದ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲವೆಂದು, ಕೋವಿಡ್ ನಿಯಂತ್ರಣಕ್ಕೆ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ನಿರ್ಬಂಧ ಅನಿವಾರ್ಯವೆಂಬ ವರದಿ ನೀಡಿ ತಮ್ಮ ವಾದವನ್ನು ಸಮರ್ಥಿಸಿಕೊಂಡಿತ್ತು.ಆದರೆ ಈ ವಾದವನ್ನು ನಿರಾಕರಿಸಿದ ಅರ್ಜಿದಾರರು ಎಣ್ಮಕಜೆ ಪಂಚಾಯತ್ ಗೊಳಪಟ್ಟ ಜನರಿಗೆ ನೂರ ಮೂವತ್ತು ಕಿಲೋಮೀಟರ್ ಸುತ್ತಿಬರಬೇಕಾದ ತಲಪ್ಪಾಡಿ ಚೆಕ್ ಪೋಸ್ಟ್ ಹಾಗೂ ಜಾಲ್ಸೂರು ಚೆಕ್ ಪೋಸ್ಟ್ ಮೂಲಕ ಸಂಚಾರ ಅಸಾಧ್ಯ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವಾದವು ಅಪ್ರಾಯೋಗಿಕವೆಂದು ಹೈಕೋರ್ಟ್ ನಲ್ಲಿ ವಾದ ಮಂಡಿಸಿತ್ತು. ಇದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ವಾದವನ್ನು ತಳ್ಳಿದ ಹೈಕೋರ್ಟ್ ತನ್ನ ಅತೃಪ್ತಿ ವ್ಯಕ್ತಪಡಿಸಿ ಅಪ್ರಾಯೋಗಿಕವಾದ ನಿಲುವು ಸರಿಯಲ್ಲವೆಂದು ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾದ ಸಮಗ್ರ ವರದಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆಯನ್ನು ನೀಡಿತ್ತು. ಅರ್ಜಿಯ ಮುಂದಿನ ವಾದವನ್ನು 18 ನೇ ದಿನಾಂಕಕ್ಕೆ ಮುಂದೂಡಲಾಗಿತ್ತು.
ಆದರೆ ಹೈಕೋರ್ಟ್ ನ ನಿಲುವು ಅರ್ಜಿದಾರರ ವಾದಕ್ಕೆ ಪೂರಕವಾಗುವ ರೀತಿಯಲ್ಲಿ ಬದಲಾಗುವುದನ್ನು ಅರಿತು ಕೊಂಡ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೊನೆಗೂ ಸಾರಡ್ಕ ಚೆಕ್ ಪೋಸ್ಟ್ ಮೂಲಕ ಸಂಚಾರಕ್ಕೆ ಅನುಮತಿ ನೀಡಲು ಮುಂದಾಗಿದೆ.ಸಾರಡ್ಕ ಚೆಕ್ ಪೋಸ್ಟ್ ತೆರೆಯದೆ ಮತ್ತೊಂದು ವಾದಕ್ಕೆ ಪ್ರಾಶಸ್ತ್ಯವಿಲ್ಲವೆಂದು ಮನಗಂಡ ದಕ್ಷಿಣ ಕನ್ನಡ ಜಿಲ್ಲಾಡಳಿತವು ಹೈಕೋರ್ಟ್ ನ ಛೀಮಾರಿ ತಪ್ಪಿಸಲು ಹಾಗೂ ಮಂಗಳವಾರ ನಡೆಯುವ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಾರಡ್ಕ ಚೆಕ್ ಪೋಸ್ಟ್ ಹಾಗೂ ಗಡಿ ಪ್ರದೇಶಗಳಲ್ಲಿರುವ ಎಲ್ಲಾ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆಯೆಂಬ ವರದಿ ನೀಡಲು ಪೂರಕವಾಗುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮಕೈಗೊಂಡಿದೆಯೆಂದು ಹೇಳಲಾಗುತ್ತಿದೆ. ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗಿದ್ದ ಸಾರಡ್ಕ ಚೆಕ್ ಪೋಸ್ಟ್ ವಿವಾದವು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಿದೆಯೆಂದು ನಿರೀಕ್ಷಿಸಲಾಗಿದೆ. ಗಡಿಪ್ರದೇಶದ ಜನರ ಸಮಸ್ಯೆಗೆ ಪರಿಹಾರ ಕೋರಿ ಸಲ್ಲಿಸಿದ ಅರ್ಜಿದಾರರ ಬೇಡಿಕೆಯು ಈಡೇರಿದಂತಾಗಿದೆ.ಈ ಮೂಲಕ ಕಳೆದ ಐದಾರು ತಿಂಗಳಿಂದ ತೊಂದರೆಗೊಳಗಾದ ಸಾಯ ,ಚವರ್ಕಾಡ್ ಭಾಗದ ಜನರಿಗೆ ಸಂಚಾರ ಸಮಸ್ಯೆಯು ಬಗೆಹರಿದ ನೆಮ್ಮದಿ ಮೂಡಿದೆ.

