HEALTH TIPS

ಭಾರತದಲ್ಲಿ ಕೋವಿಡ್‌-19 ಮರಣ ಪ್ರಮಾಣ 7 ತಿಂಗಳಲ್ಲೇ ಕನಿಷ್ಟ: ಕೇಂದ್ರ ಆರೋಗ್ಯ ಸಚಿವಾಲಯ

    ನವದೆಹಲಿ: ದೇಶದಲ್ಲಿ ಪ್ರಸ್ತುತ ಕೋವಿಡ್‌-19 ಸೋಂಕಿನ ಮರಣ ಪ್ರಮಾಣ ಶೇ 1.52ಕ್ಕೆ ಕುಸಿದಿದ್ದು, ಇದು ಕಳೆದ 7 ತಿಂಗಳಲ್ಲೇ ಕನಿಷ್ಠ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

    ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವಾಲಯ, ದೇಶದಲ್ಲಿ ಪ್ರಸ್ತುತ ಕೋವಿಡ್‌-19 ಸೋಂಕಿನ ಮರಣ ಪ್ರಮಾಣ ಶೇ 1.52ರಷ್ಟಿದ್ದು, ಮಾರ್ಚ್ 22ರ ನಂತರ ದಾಖಲಾದ ಅತಿ ಕಡಿಮೆ ಮರಣ ಪ್ರಮಾಣ ಇದಾಗಿದೆ. ಪ್ರತಿ 10 ಲಕ್ಷ ಜನರಲ್ಲಿ ಕೋವಿಡ್‌ ಸೋಂಕಿಗೆ 81 ಜನರು  ಮೃತಪಡುತ್ತಿದ್ದು, ಜಗತ್ತಿನಲ್ಲೇ ಅತಿ ಕಡಿಮೆ ಮರಣ ಪ್ರಮಾಣ ಇರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಅಕ್ಟೋಬರ್ 4ರ ನಂತರ ದೇಶದಲ್ಲಿ ಪ್ರತಿನಿತ್ಯ ಕೋವಿಡ್‌ಗೆ ಮೃತಪಡುತ್ತಿರುವವರ ಸಂಖ್ಯೆ 1 ಸಾವಿರಕ್ಕಿಂತ ಕಡಿಮೆ ಇದೆ ಎಂದು ಹೇಳಿದೆ.

    'ಕೋವಿಡ್‌ ಮರಣ ಪ್ರಮಾಣ ಕ್ರಮೇಣವಾಗಿ ಇಳಿಕೆಯಾಗುತ್ತಿದ್ದು, ಪ್ರತಿ10 ಲಕ್ಷ ಜನರಲ್ಲಿ ಪುದುಚೇರಿಯಲ್ಲಿ 403, ಮಹಾರಾಷ್ಟ್ರದಲ್ಲಿ 335, ಗೋವಾದಲ್ಲಿ 331, ದೆಹಲಿಯಲ್ಲಿ 317, ಕರ್ನಾಟಕದಲ್ಲಿ 152, ತಮಿಳುನಾಡಿನಲ್ಲಿ 135 ಹಾಗೂ ಪಂಜಾಬ್‌ನಲ್ಲಿ 131 ಜನರು ಸೋಂಕಿಗೆ ಮೃತಪಡುತ್ತಿದ್ದಾರೆ.  ಒಟ್ಟಾರೆ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಾವಿನ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಅಧಿಕವಾಗಿದೆ. ಗುಣಮುಖರ ಸಂಖ್ಯೆ ಕೂಡ ಅಧಿಕವಾಗಿದ್ದು, ಶುಕ್ರವಾರ ಬೆಳಗ್ಗೆ 8ಗಂಟೆಯವರೆಗಿನ 24 ಗಂಟೆ ಅವಧಿಯಲ್ಲಿ ಕೋವಿಡ್‌ 19ನಿಂದ 70,338 ಜನರು ಗುಣಮುಖರಾಗಿದ್ದು, 63,371  ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕಿನಿಂದ 895 ಜನರು ಮೃತಪಟ್ಟಿದ್ದು, ಈ ಪೈಕಿ 337 ಜನರು ಮಹಾರಾಷ್ಟ್ರದವರಾಗಿದ್ದಾರೆ. ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 64.53 ಲಕ್ಷ ದಾಟಿದ್ದು, ಇದು ಸಕ್ರಿಯ ಪ್ರಕರಣಗಳನ್ನೂ (56.49 ಲಕ್ಷ) ಮೀರಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

    ಅಲ್ಲದೆ ದೇಶದ ಒಟ್ಟಾರೆ ಪ್ರಕರಣದ ಶೇ.10.92ರಷ್ಟು ಮಾತ್ರ ಸಕ್ರಿಯ ಪ್ರಕರಣಗಳಿದ್ದು, ಗುಣಮುಖರ ಪ್ರಮಾಣ ಶೇ 87.56ಕ್ಕೆ ಏರಿಕೆಯಾಗಿದೆ. ಹೊಸ ಕೋವಿಡ್‌–19 ಪ್ರಕರಣಗಳಲ್ಲಿ ಶೇ 79 ಪ್ರಕರಣಗಳು 10 ರಾಜ್ಯಗಳಲ್ಲಿ ದಾಖಲಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ನಿತ್ಯವೂ 10 ಸಾವಿರಕ್ಕಿಂತ ಅಧಿಕ ಹಾಗೂ  ಕರ್ನಾಟಕಲ್ಲಿ 8 ಸಾವಿರಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

    ಕೋವಿಡ್ ಚಿಕಿತ್ಸೆಗೆಂದೇ ದೇಶಾದ್ಯಂತ 2,212 ಆಸ್ಪತ್ರೆಗಳಿದ್ದು, ಇಲ್ಲಿ ಗುಣಮುಟ್ಟದ ಚಿಕಿತ್ಸೆ ನೀಡಲಾಗುತ್ತಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಮುಂಜಾಗ್ರತಾ ಕ್ರಮಗಳೊಂದಿಗೆ ಇಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಸೋಂಕಿನ ಮಾರಣಾಂತಿಕತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಿರ್ಣಾಯಕ ರೋಗಿಗಳ ಕ್ಲಿನಿಕಲ್  ನಿರ್ವಹಣೆಯಲ್ಲಿ ಐಸಿಯು ವೈದ್ಯರ ಸಾಮರ್ಥ್ಯವನ್ನು ಹೆಚ್ಚಿಸುವ ವಿಶಿಷ್ಟ ಉಪಕ್ರಮ, ಇ-ಐಸಿಯು ಅನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಪ್ರಾರಂಭಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries