ತಿರುವನಂತಪುರ: ಕಾಸರಗೋಡಿನ ಕೋವಿಡ್ ಚಟುವಟಿಕೆಗಳ ಭಾಗವಾಗಿ ಟಾಟಾ ಗ್ರೂಪ್ ನಿರ್ಮಿಸಿರುವ ಆಸ್ಪತ್ರೆ ಅಕ್ಟೋಬರ್ 28 ರಿಂದ ಕಾರ್ಯಾರಂಭ ಮಾಡಲಿದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಭಾನುವಾರ ತಿಳಿಸಿದ್ದಾರೆ.
ಆಸ್ಪತ್ರೆಯ ಸುಗಮ ಕಾರ್ಯನಿರ್ವಹಣೆಗೆ ಮೊದಲ ಹಂತದ ವೈದ್ಯಕೀಯ, ಅರೆವೈದ್ಯಕೀಯ ಮತ್ತು ಆಡಳಿತ ವಿಭಾಗಗಳಿಗೆ 191 ಹೊಸ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ನಡೆಸಲಾಗಿದೆ. ಆರಂಭದಲ್ಲಿ ಕೋವಿಡ್ ಆಸ್ಪತ್ರೆಯಾಗಿದ್ದರೂ ಬಳಿಕ ಸಾಮಾನ್ಯ ಆಸ್ಪತ್ರೆಯಾಗಿ ಬದಲಾಗಲಿದೆ. ಇದರೊಂದಿಗೆ ಕಾಸರಗೋಡು ಪ್ರದೇಶದ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುವುದು ಎಂದರು.
ಆಸ್ಪತ್ರೆಯು 553 ಹಾಸಿಗೆಗಳೊಂದಿಗೆ ಕಾರ್ಯನಿರ್ವಹಿಸಲು ಪ್ರಾರಂಭಿಸಲಿದೆ. ಜಿಲ್ಲೆಯಲ್ಲಿ ಕೋವಿಡ್ ತಡೆಗಟ್ಟುವ ಚಟುವಟಿಕೆಗಳನ್ನು ಬಲಪಡಿಸುವ ಭಾಗವಾಗಿ ರಾಜ್ಯ ಸರ್ಕಾರದ ಸಹಾಯದಿಂದ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಿರ್ಮಾಣ ಪೂರ್ಣಗೊಂಡು ತಿಂಗಳಾದರೂ ಚಟುವಟಿಕೆ ಆರಂಭಿಸದಿರುವುದನ್ನು ವಿರೋಧಿಸಿ ನವೆಂಬರ್ 1 ರಿಂದ ಅನಿರ್ದಿಷ್ಟ ಸತ್ಯಾಗ್ರಹವನ್ನು ಪ್ರಾರಂಭಿಸಲಾಗುವುದು ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಈಗಾಗಲೇ ಹೇಳಿಕೆ ನೀಡಿದ್ದರು.





