ತಿರುವನಂತಪುರ: ಓಣಂ ಆಚರಣೆಯ ಬಳಿಕ ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಕೇಂದ್ರ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಕೇರಳದಲ್ಲಿ ಕಳಪೆ ಮಟ್ಟದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳಿವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ ಎಂಬ ಆರೋಪವನ್ನು ಸಚಿವರು ನಿರಾಕರಿಸಿದರು.
ಕೇರಳದಲ್ಲಿ ಕೋವಿಡ್ ಹಿನ್ನೆಲೆಯಲ್ಲಿ ಕೈಗೊಂಡ ನಿಯಂತ್ರಣ ಕ್ರಮಗಳನ್ನು ಕೇಂದ್ರ ಆರೋಗ್ಯ ಸಚಿವರು ಶ್ಲಾಘಿಸಿದರು. ಅವರು ರಾಜಕೀಯವನ್ನು ನೋಡದೆ ಕೇರಳವನ್ನು ಹೊಗಳಿರುವರು. ಕೇರಳದಲ್ಲಿ ಅತ್ಯಂತ ಕಳಪೆ ನಿಯಂತ್ರಣಗಳು ನಡೆಯುತ್ತಿವೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಸಚಿವರನ್ನು ಸಂಪರ್ಕಿಸಿದ್ದೇನೆ ಮತ್ತು ಅವರು ಆ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಬಗ್ಗೆ ಏನೂ ಹೇಳಿಲ್ಲ ಎಂದು ಸಚಿವೆ ಶೈಲಾಜಾ ಸಮಜಾಯಿಷಿ ನೀಡಿರುವರು.
ಓಣಂ ಆಚರಣೆಯ ಬಳಿಕ ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ನಿಜ. ಓಣಂ ಆಚರಣೆಯ ಅಂಗವಾಗಿ ಜನರು ಎಗ್ಗಿಲ್ಲದೆ ಪ್ರತಿಬಂಧಕಗಳನ್ನು ಮರೆತು ಜಮಾಯಿಸಿದ್ದರು. ಇತರ ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ವಿವಿಧ ಆಚರಣೆಗಳು ನಡೆಯಬೇಕಾಗಿರುವುದರಿಂದ ಕೇರಳದ ಉದಾಹರಣೆಯನ್ನು ಕೇಂದ್ರ ಸಚಿವರು ಉಲ್ಲೇಖಿಇಸ ಜಾಗೃತಿಗೆ ಪ್ರಯತ್ನಿಸಿದರು ಎಂದು ಸಚಿವೆ ಹೇಳಿದರು. ಕೇರಳದಲ್ಲಿ ಸಾವಿನ ಪ್ರಮಾಣ ಇತರ ರಾಜ್ಯಗಳಿಗಿಂತ ಕಡಿಮೆಯಿದೆ ಎಂದು ಸಚಿವರು ಗಮನಸೆಳೆದಿರುವರು ಎಂದು ಕೆ.ಕೆ. ಶೈಲಾಜಾ ಅವರು ಫೇಸ್‍ಬುಕ್ ಲೈವ್‍ನಲ್ಲಿ ತಿಳಿಸಿದ್ದಾರೆ.




