ಕುಂಬಳೆ: ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ 95ನೇ ಜನ್ಮದಿನಾಚರಣೆಯ ಪ್ರಯುಕ್ತ ಸೋಮವಾರ ಶಿರಿಯ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಆಶ್ರಯದಲ್ಲಿ ಶಿರಿಯ ಸಾಯಿಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 24 ಮಂದಿಗೆ ಅಮೃತಕಲಶವನ್ನು ವಿತರಿಸಲಾಯಿತು.
ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ಕಾಸರಗೋಡು ಜಿಲ್ಲಾಧ್ಯಕ್ಷ ಹಿರಣ್ಯ ಮಹಾಲಿಂಗ ಭಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಭಗವಂತನ ಇಚ್ಛೆ ಇಲ್ಲದಿದ್ದಲ್ಲಿ ಒಂದು ಹುಲ್ಲುಕಡ್ಡಿಯೂ ಅಲುಗಾಡಲು ಅಸಾಧ್ಯ. ದೇವರಿಗೆ ಪ್ರೀತಿ ಪಾತ್ರರಾಗುವಂತೆ ಮನುಷ್ಯ ಜೀವನವನ್ನು ಮಾಡುವುದ ಜತೆಗೆ ಇಲ್ಲದನಿಗೂ ನೆರವಾಗುವುದು ಧರ್ಮ. ಸ್ವಂತ ಬೆಳವಣಿಗೆಯಾಗುವುದರ ಜೊತೆಯಲ್ಲಿ ಇತರರನ್ನೂ ಬೆಳೆಸಬೇಕು ಎಂದು ತಿಳಿಸಿದರು. ಶಿರಿಯ ಸಮಿತಿಯ ಮಾಜಿ ಸಂಚಾಲಕ ಮಲಾರ್ ಜಯರಾಮ ರೈ ಮಾತನಾಡಿ, ಭಗವಾನ್ ಬಾಬಾ ಅವರು ಮನುಷ್ಯ ದೇಹದಲ್ಲಿದ್ದರೂ ದೇವರಂತೆ ಬದುಕಿ ಮಾದರಿಯಾದವರು. ಮುಂದಿನ ಪೀಳಿಗೆ ಅವರ ಮಾರ್ಗದರ್ಶನದಂತೆ ನಡೆದು ಬದುಕನ್ನು ಬಂಗಾರಗೊಳಿಸಬೇಕು ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಸಿ.ಉಪ್ಪಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಬಾಲವಿಕಾಸ ಹಳೆ ವಿದ್ಯಾರ್ಥಿ ಹಾಗೂ ಸಾಯಿಬಂಧುಗಳ ಕೊಡುಗೆಯ ರೂಪದಲ್ಲಿ ನೀಡಿದ ಅಗತ್ಯ ಸಾಮಾಗ್ರಿಗಳ ಅಮೃತಕಲಶ(ಕಿಟ್)ವನ್ನು ಆಯ್ದ 24 ಮನೆಗಳಿಗೆ ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಪುಟ್ಟಪರ್ತಿಯಿಂದ ತಂದ ಅರಳಿ ಗಿಡವನ್ನು ಜಿಲ್ಲಾಧ್ಯಕ್ಷರು ಶಿರಿಯ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಲಕ್ಷ್ಮೀ ನಾರಾಯಣ ಶೆಟ್ಟಿ, ಯಶವಂತ ಆಚಾರ್ಯ, ಕೃಷ್ಣ ಶಿರಿಯ, ಶಾಂತಾರಾಮ ಶೆಟ್ಟಿ, ಮೈನಾ ಕುಂಬಳೆ, ಸಾವಿತ್ರೀ, ಸಾಯಿಭದ್ರಾ ರೈ ಮತ್ತಿತರರು ನೇತೃತ್ವ ನೀಡಿದರು. ಶಿರಿಯ ಸಮಿತಿ ಸಂಚಾಲಕ ಲಲಿತ್‍ಕುಮಾರ್ ಮುಟ್ಟಂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಬಾಬಾ ಅವರ ಜನ್ಮ ದಿನಾಚರಣೆಯ ಅಂಗವಾಗಿ ಸಾಯಿ ಮಂದಿರದಲ್ಲಿ ವಿಶೇಷ ಭಜನೆ, ಮಹಾಮಂಗಳಾರತಿ ಬಳಿಕ ಲಘು ಉಪಾಹಾರವನ್ನು ನೀಡಲಾಯಿತು.


