HEALTH TIPS

ಅಡ್ಡ ಪರಿಣಾಮ ಆಗಿತ್ತು, ಆದರೆ ಅದು ಲಸಿಕೆಯಿಂದಲ್ಲ: ಭಾರತ್ ಬಯೋಟೆಕ್ ಸ್ಪಷ್ಟನೆ

         ಹೈದರಾಬಾದ್: ಭಾರತದಲ್ಲಿಯೇ ತಯಾರಾಗುತ್ತಿರುವ ಸ್ವದೇಶಿ ನಿರ್ಮಿತ ಕೊರೊನಾ ವೈರಸ್ ಲಸಿಕೆ ಕೋವ್ಯಾಕ್ಸಿನ್‌ನ ಪ್ರಯೋಗದ ವೇಳೆ ಅಡ್ಡಪರಿಣಾಮ ಕಂಡುಬಂದಿದ್ದರೂ ಅದರ ಬಗ್ಗೆ ಮಾಹಿತಿ ನೀಡಲು ಭಾರತ್ ಬಯೋಟೆಕ್ ವಿಫಲವಾಗಿತ್ತು ಎಂಬ ಆರೋಪಕ್ಕೆ ಕಂಪೆನಿ ಸ್ಪಷ್ಟೀಕರಣ ನೀಡಿದೆ. ಅಡ್ಡ ಪರಿಣಾಮದ ಘಟನೆ ಗೊತ್ತಾದ 24 ಗಂಟೆಯ ಒಳಗೇ ಅದರ ವರದಿ ನೀಡಿದ್ದಾಗಿ ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪೆನಿ ತಿಳಿಸಿದೆ.

         ಶನಿವಾರ ಹೇಳಿಕೆ ನೀಡಿರುವ ಭಾರತ್ ಬಯೋಟೆಕ್, 'ಆಗಸ್ಟ್ 2020ರ ಮೊದಲ ಹಂತದ ಕ್ಲಿನಿಕಲ್ ಪ್ರಯೋಗದ ಸಂದರ್ಭದಲ್ಲಿ ಅಡ್ಡಪರಿಣಾಮ ಕಂಡುಬಂದ ವರದಿಯನ್ನು ಅದು ಸಂಭವಿಸಿದ ಮತ್ತು ಖಚಿತವಾದ 24 ಗಂಟೆಗಳ ಒಳಗೆ ಸಿಡಿಎಸ್‌ಸಿಒ-ಡಿಸಿಜಿಐಗೆ ನೀಡಲಾಗಿತ್ತು' ಎಂದು ತಿಳಿಸಿದೆ.

            ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಅಭಿವೃದ್ಧಿ ಮತ್ತು ಪ್ರಯೋಗದ ಕಾರ್ಯದಲ್ಲಿ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜತೆಗೂಡಿ ಕಾರ್ಯನಿರ್ವಹಿಸುತ್ತಿವೆ. ಲಸಿಕೆಯ ಮೂರನೇ ಹಂತದ ಪ್ರಯೋಗವನ್ನು ಸ್ವಯಂ ಸೇವಕರ ಮೇಲೆ ನಡೆಸಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಈಗಾಗಲೇ ಭಾರತ್ ಬಯೋಟೆಕ್‌ಗೆ ಅನುಮತಿ ನೀಡಿದ್ದು, ಶುಕ್ರವಾರ ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್ ಸ್ವತಃ ಈ ಲಸಿಕೆ ಪಡೆದುಕೊಳ್ಳುವ ಮೂಲಕ ಮೂರನೇ ಹಂತದ ಪ್ರಯೋಗಕ್ಕೆ ಚಾಲನೆ ನೀಡಿದ್ದರು.

        ಆಗಸ್ಟ್‌ನಲ್ಲಿ ನಡೆದ ಮೊದಲ ಹಂತದ ಪ್ರಯೋಗದ ವೇಳೆ ಲಸಿಕೆ ತೆಗೆದುಕೊಂಡ ಸ್ವಯಂ ಸೇವಕರಲ್ಲಿ ಅಡ್ಡಪರಿಣಾಮ ಕಂಡುಬಂದಿತ್ತು. ಆದರೆ ಅದನ್ನು ಭಾರತ್ ಬಯೋಟೆಕ್ ಸಂಸ್ಥೆ ಬಹಿರಂಗಪಡಿಸಿರಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಸಂಬಂಧ ಸ್ಪಷ್ಟೀಕರಣ ನೀಡಿರುವ ಕಂಪೆನಿ ಘಟನೆ ನಡೆದಿರುವುದನ್ನು ಸಹ ಖಚಿತಪಡಿಸಿದೆ. ಈ ಅಡ್ಡಪರಿಣಾಮದ ಘಟನೆ ಬಗ್ಗೆ ಸ್ಥೂಲವಾದ ಅಧ್ಯಯನ ನಡೆಸಲಾಗಿದೆ. ಈ ಅಡ್ಡಪರಿಣಾಮವು ಲಸಿಕೆಗೆ ಸಂಬಂಧಿಸಿದ್ದು ಅಲ್ಲ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಹೇಳಿದೆ.

        ಮಾರ್ಗಸೂಚಿಗಳ ಪ್ರಕಾರ ಲಸಿಕೆ ಪ್ರಯೋಗದ ವೇಳೆ ಉಂಟಾಗುವ ಎಲ್ಲ ಅಡ್ಡಪರಿಣಾಮಗಳನ್ನೂ ಸಿಡಿಎಸ್‌ಸಿಒ-ಡಿಸಿಜಿಐ, ನೈತಿಕ ಸಮಿತಿಗಳು ಮತ್ತು ದತ್ತಾಂಶ ಸುರಕ್ಷತೆ ನಿಗಾ ಮಂಡಳಿ ಹಾಗೂ ಪ್ರಾಯೋಜಕರ ಗಮನಕ್ಕೆ ತರಬೇಕು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries