ಮಲಪ್ಪುರಂ: ಮದರಸಾಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಕಪ್ಪು ಮಾಸ್ಕ್(ಮಕಾನಾ) ಗಳ ಬದಲು ಬಿಳಿ ಮಾಸ್ಕ್ ಧರಿಸಲು ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ನಿರ್ದೇಶನ ನೀಡಿದೆ. ಮಕ್ಕಳ ಹಕ್ಕುಗಳ ಆಯೋಗದ ಶಿಫಾರಸು ಪ್ರಕಾರ ಕಪ್ಪು ಮಾಸ್ಕ್ ಗಳು ಅಪಘಾತಗಳಿಗೆ ಕಾರಣವಾಗಬಹುದು ಎಂಬ ಹೊಸ ಸಂಶೋಧನೆಯಿಂದಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಒಬ್ಬ ವ್ಯಕ್ತಿಯು ಮುಂಜಾನೆ ಮತ್ತು ಸಂಜೆ ರಸ್ತೆಯಲ್ಲಿ ಕಪ್ಪು ಮಾಸ್ಕ್ ಮತ್ತು ಮುಸುಕು ಧರಿಸಿದರೆ ವಾಹನ ಚಾಲಕರಿಗೆ ಗಮನಿಸುವಲ್ಲಿ ತೊಡಕುಗಳುಂಟಾಗಿ ಇದು ಅಪಘಾತಕ್ಕೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಪಟ್ಟಾಂಬಿ ಜಂಟಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮದರಸಾ ಶಿಕ್ಷಕರಿಗೆ ಬಿಳಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲು ನಿರ್ದೇಶನ ನೀಡಿದ್ದು ಆಕ್ಷೇಪಗಳು ವ್ಯಕ್ತವಾಗತೊಡಗಿದೆ. ಈ ಬಗ್ಗೆ ಮಾಧ್ಯಮ ವರದಿ ಗಮನಿಸಿದ ಮಕ್ಕಳ ಹಕ್ಕುಗಳ ಆಯೋಗವೂ ಇದೇ ರೀತಿಯ ಪ್ರಸ್ತಾಪವನ್ನು ಮಂಡಿಸಿತು. ಮಕ್ಕಳ ಸುರಕ್ಷತೆಗಾಗಿ ಈ ನಿಟ್ಟಿನಲ್ಲಿ ಆದೇಶ ಹೊರಡಿಸುವಂತೆ ಮಕ್ಕಳ ಹಕ್ಕುಗಳ ಆಯೋಗ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಬಿಳಿ ಮಾಸ್ಕ್ ಧರಿಸುವುದನ್ನು ಪ್ರೋತ್ಸಾಹಿಸಲು ರಸ್ತೆ ಸುರಕ್ಷತಾ ತರಗತಿಗಳು ಮತ್ತು ಮೋಟಾರು ವಾಹನ ಇಲಾಖೆಯ ಮೂಲಕ ಅಭಿಯಾನ ನಡೆಸಲು ಸಾರಿಗೆ ಆಯುಕ್ತರು ನಿರ್ದೇಶನ ನೀಡಿದ್ದಾರೆ. ಇದಲ್ಲದೆ, ವಕ್ಫ್ ಮಂಡಳಿಯ ಸಿಇಒ ಮತ್ತು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಕೆ ನಜೀರ್ ಮತ್ತು ಸಿ ವಿಜಯಕುಮಾರ್ ಅವರು ಮದರಸಾಗಳು ಮತ್ತು ಇತರ ಸಂಸ್ಥೆಗಳಿಗೆ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿರ್ದೇಶನ ನೀಡಿರುವರು.





