ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 2021-22 ಆರ್ಥಿಕ ವರ್ಷಕ್ಕೆ ನಬಾರ್ಡ್ ಸಿದ್ಧಗೊಳಿಸಿರುವ ಸಾಲ ಸಾಧ್ಯತೆ ಯೋಜನೆ ರೂಪುರೇಷೆ ಬಿಡುಗಡೆಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಅವಲೋಕನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ರೂಪುರೇಷೆಯನ್ನು ಬಿಡುಗಡೆಗೊಳಿಸಿದರು. ಮೊದಲ ಪ್ರತಿಯನ್ನು ಜಿಲ್ಲಾ ಲೀಡ್ ಬ್ಯಾಂಕ್ ಪ್ರಬಂಧಕ ಎನ್.ಕಣ್ಣನ್ ಪಡೆದರು.
ಜಿಲ್ಲೆಯ ಅಭಿವೃದ್ಧಿಗಾಗಿ ಕೃಷಿ, ಸೂಕ್ಷ್ಮ ಕಿರು ಎಡೆಕಾಲ ಉದ್ದಿಮೆ, ವಸತಿ, ಶಿಕ್ಷಣ ಸಾಲಗಳು ಇತ್ಯಾದಿ ಆದ್ಯತೆ ವಲಯಗಳಿಗೆ ನೂತನ ಮತ್ತು ಕ್ರಿಯಾತ್ಮಕ ರೀತಿ ಬ್ಯಾಂಕ್ ಸಾಲ ಲಭಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಧಿಕಾರಿ ಈ ವೇಳೆ ತಿಳಿಸಿದರು.
ಬ್ಯಾಂಕ್ ಗಳ ಮುಖಾಂತರ ಜಾರಿಗೊಳಿಸಬೇಕಾದ 5,462 ಕೋಟಿ ರೂ. ಸಾಲ ಸಾಧ್ಯತಾ ಯೋಜನೆ 2021-22 ಆರ್ಥಿಕ ವರ್ಷದಲ್ಲಿ ಜಿಲ್ಲೆಗಾಗಿ ನಬಾರ್ಡ್ ಕೊಡುಗೆಯಾಗಿ ನೀಡುತ್ತಿದೆ ಎಂದು ಎ.ಜಿ.ಎಂ.ಜ್ಯೋತಿಷ್ ಜಗನ್ನಾಥ್ ತಿಳಿಸಿದರು. ಇದರಲ್ಲಿ 3.195 ಕೋಟಿ ರೂ.(ಶೇ 58) ಕೃಷಿ ವಲಯಕ್ಕೆ, ಶೇ 18 ಸೂಕ್ಷ್ಮ ಕಿರು ಎಡೆಕಾಲ ಉದ್ದಿಮೆಗಳಿಗೆ, ಶೇ 13 ವಸತಿ ಸಾಲ, ಶೇ 4 ಶಿಕ್ಷಣ ಸಾಲ, ಶೇ 7 ಇತರ ಆದ್ಯತೆ ವಲಯಗಳೀಗೆ ಮೀಸಲಿರಿಸಲಾಗಿದೆ.
ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಎ.ಜಿ.ಎಂ.ಮುರಳಿ ಕೃಷ್ಣ, ಕೆನರಾ ಬ್ಯಾಂಕ್ ಡಿವಿಝನಲ್ ಮೆನೆಜರ್ ರಾಜೇಶ್, ಕೇರಳ ಗ್ರಾಮೀಣ ಬ್ಯಾಂಕ್ ರೀಜನಲ್ ಮೆನೆಜರ್ ಬಾಪ್ಟಿ ನಿಸಾರಿ, ವಿವಿಧ ಬ್ಯಾಂಕ್/ ಇಲಾಖೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


