ಕೋಝಿಕ್ಕೋಡ್: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಶೂನ್ಯ ಮತಗಳನ್ನು ಪಡೆಯುವ ಮೂಲಕ ನಾಚಿಕೆಗೇಡಿನ ಸೋಲಿನೊಂದಿಗೆ ಎಲ್ಡಿಎಫ್ ಅಭ್ಯರ್ಥಿ ಹೊಸ ದಾಖಲೆ ನಿರ್ಮಿಸಿ ಅಚ್ಚರಿಗೊಳಿಸಿದ್ದಾರೆ. ಕೊಡುವಳ್ಳಿ ನಗರಸಭೆಯಲ್ಲಿ ಎಲ್‍ಡಿಎಫ್ ಅಭ್ಯರ್ಥಿಯಾಗಿ ಚುಂಡಪುರಂ ವಾರ್ಡ್‍ನಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿ ಶೂನ್ಯ ಮತಗಳನ್ನು ಪಡೆದರು. ಅಲ್ಲಿ ಕಾರಾಟ್ ಫೈಸಲ್ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವರು.
ಕಾರಾಟ್ ಫೈಸಲ್ ಅವರನ್ನು ಆರಂಭದಲ್ಲಿ ಎಲ್ಡಿಎಫ್ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಆದರೆ, ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕಸ್ಟಮ್ಸ್ ಪ್ರಶ್ನಿಸಿದ ಬಳಿಕ ರಾಜ್ಯ ನಾಯಕತ್ವ ಅವರ ಬೆಂಬಲವನ್ನು ನಿರಾಕರಿಸಿತು.
ಫೈಸಲ್ ಅವರ ಸ್ಥಾನಕ್ಕೆ ಐಎನ್ ಎಲ್ ನಾಯಕ ಅಬ್ದುಲ್ ರಶೀದ್ ಅವರನ್ನು ಎಲ್ಡಿಎಫ್ ಅಭ್ಯರ್ಥಿಯಾಗಿ ಆಯ್ಕೆಮಾಡಲಾಗಿತ್ತು. ಕಳೆದ ಬಾರಿ ಕಾರಾಟ್ ಫೈಸಲ್ ಪರಂಬತುಕಾವುವಿಂದ ಎಲ್ಡಿಎಫ್ ಅಭ್ಯರ್ಥಿಯಾಗಿ ಗೆದ್ದಿದ್ದರು.
ಆದರೆ ಶೂನ್ಯಮತ ಪಡೆದಿರುವುದರ ಹಿಂದಿನ ಲಾಜಿಕ್ ತೀವ್ರ ಕುತೂಹಲ ಮೂಡಿಸಿದೆ. ಸ್ವತಃ ತನಗೆ ತಾನೇ ಮತ ಚಲಾಯಿಸಿದ್ದರೂ ಒಂದು ಮತವಾದರೂ ಲಭಿಸಬೇಕಾದಲ್ಲಿ ಶೂನ್ಯ ಮತ ಲಭಿಸಿರುವುದರ ಹಿಂದಿನ ಅಸಲಿಯತ್ತು ಏನೆಂಬುದೇ ಅರ್ಥವಾಗದೆ ಜನರು ಕಂಗಾಲಾಗಿದ್ದಾರೆ.


