HEALTH TIPS

ಗಣರಾಜ್ಯೋತ್ಸವಕ್ಕೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಮುಖ್ಯ ಅತಿಥಿ

        ಲಂಡನ್‌: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು 2021ರ ಜನವರಿ 26ರಂದು ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

         ಕಳೆದ ತಿಂಗಳು ಬೋರಿಸ್‌ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಮೋದಿ ಅವರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದರು. ಇದಕ್ಕೆ ಬೋರಿಸ್‌ ಅವರು ಮಂಗಳವಾರ ಸಮ್ಮತಿ ಸೂಚಿಸಿದ್ದಾರೆ.

           ಹೋದ ವರ್ಷ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಬೋರಿಸ್‌ ಅವರು ಭಾರತದ ಜೊತೆ ದ್ವಿಪಕ್ಷೀಯ ಸಂಬಂಧ ವೃದ್ಧಿಸಲು ಕೈಗೊಂಡಿರುವ ಮೊದಲ ಭೇಟಿ ಇದಾಗಿದೆ.

'ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ. ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ಮೋದಿ ಹಾಗೂ ನಾನು ವಾಗ್ದಾನ ನೀಡಿದ್ದೆವು. ಈ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಲಿದ್ದೇವೆ. ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸಿ ಅಭಿವೃದ್ಧಿ ಪರ್ವಕ್ಕೆ ನಾಂದಿ ಹಾಡುವುದೂ ನಮ್ಮ ಧ್ಯೇಯವಾಗಿದೆ. ವಾಣಿಜ್ಯ ವಹಿವಾಟು ಹಾಗೂ ಹೂಡಿಕೆ ಭವಿಷ್ಯದ ಬಗ್ಗೆಯೂ ವಿಚಾರ ವಿನಿಮಯ ನಡೆಸಲಿದ್ದೇವೆ' ಎಂದು ಜಾನ್ಸನ್‌ ತಿಳಿಸಿದ್ದಾರೆ.

              ಬೋರಿಸ್‌ ಅವರು ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿರುವ ಬ್ರಿಟನ್‌ನ ಎರಡನೇ ಪ್ರಧಾನಿಯಾಗಿದ್ದಾರೆ. 1993ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಆಗ ಬ್ರಿಟನ್‌ ಪ್ರಧಾನಿಯಾಗಿದ್ದ ಜಾನ್‌ ಮೇಜರ್‌ ಅವರು ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಬೋರಿಸ್‌ ಅವರ ಭಾರತ ಪ್ರವಾಸದ ಪೂರ್ಣ ವೇಳಾಪಟ್ಟಿಯು ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಬೋರಿಸ್‌ ಅವರೇ ಅತಿಥಿ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬೋರಿಸ್‌ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವುದನ್ನು ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಡಾಮಿನಿಕ್‌ ರಾಬ್‌ ಅವರೂ ಖಚಿತಪಡಿಸಿದ್ದಾರೆ.

        ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಅವರೊಂದಿಗಿನ ಮಾತುಕತೆಯ ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

'ಬ್ರಿಟನ್‌ನಲ್ಲಿ ಮುಂದಿನ ವರ್ಷ ನಡೆಯುವ ಜಿ-7 ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ನಾವು ಆಹ್ವಾನ ನೀಡಿದ್ದೇವೆ. ಗಣರಾಜ್ಯೋತ್ಸವದಲ್ಲಿ ಭಾಗವಹಿಸುವಂತೆ ಅವರು ನೀಡಿದ್ದ ಆಹ್ವಾನವನ್ನು ನಮ್ಮ ಪ್ರಧಾನಿ ಒಪ್ಪಿಕೊಂಡಿದ್ದಾರೆ. ಇದೊಂದು ದೊಡ್ಡ ಗೌರವ ಎಂದು ನಾವು ಭಾವಿಸುತ್ತೇವೆ' ಎಂದು ರಾಬ್‌ ತಿಳಿಸಿದ್ದಾರೆ.

        'ರಾಬ್‌ ಅವರ ಜೊತೆ ನಾಲ್ಕು ಗಂಟೆ ಮಾತುಕತೆ ನಡೆಸಲಾಗಿದೆ. ಈ ವೇಳೆ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಸೇರಿದಂತೆ ಇನ್ನೂ ಹಲವಾರು ವಿಷಯಗಳು ಕುರಿತು ಚರ್ಚಿಸಲಾಗಿದೆ' ಎಂದು ಜೈಶಂಕರ್‌ ಹೇಳಿದ್ದಾರೆ.

         'ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ರಾಜಕಾರಣದಲ್ಲಿ ಬಹಳ ದೊಡ್ಡ ಬದಲಾವಣೆಗಳಾಗಿರುವುದನ್ನು ನಾವೆಲ್ಲ ಗಮನಿಸಿದ್ದೇವೆ. ಅಫ್ಗಾನಿಸ್ತಾನದ ಪರಿಸ್ಥಿತಿ, ಕೊಲ್ಲಿ ರಾಷ್ಟ್ರಗಳಲ್ಲಿ ಆಗುತ್ತಿರುವ ಅಭಿವೃದ್ಧಿ ಹಾಗೂ ಇಂಡೊ-ಪೆಸಿಫಿಕ್‌ ಪ್ರಾಂತ್ಯದಲ್ಲಾಗುತ್ತಿರುವ ವಿಕಸನದ ಬಗ್ಗೆಯೂ ಚರ್ಚಿಸಿದ್ದೇವೆ. ಭಯೋತ್ಪಾದನೆ ಹಾಗೂ ತೀವ್ರಗಾಮಿ ಚಟುವಟಿಕಗಳಿಂದ ಎದುರಾಗುತ್ತಿರುವ ಸವಾಲುಗಳ ಕುರಿತೂ ಮಾತನಾಡಿದ್ದೇವೆ' ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಬ್‌ ಅವರು ಪರಿಸರ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಹಾಗೂ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಅವರನ್ನು ಭೇಟಿಯಾಲಿದ್ದಾರೆ.

          17ಕ್ಕೆ ಯಡಿಯೂರಪ್ಪ ಭೇಟಿ: ಇದೇ 17ರಂದು ಬೆಂಗಳೂರಿಗೆ ಬರಲಿರುವ ರಾಬ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries