ನವದೆಹಲಿ: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ವಯಸ್ಸಿನ ಸಡಿಲಿಕೆ ಕೋರಿ ಹಾಗೂ ಒಂದು ಬಾರಿ ಹೆಚ್ಚಿನ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
ರಿಟ್ ಅರ್ಜಿಯನ್ನು ವಜಾಗೊಳಿಸಿರುವುದಾಗಿ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ ಇಂದು ಪ್ರಕಟಿಸಿದೆ.
ವಯೋಮಿತಿ ಸಡಿಲಗೊಳಿಸುವುದರಿಂದ ಇತರ ಆಕಾಂಕ್ಷಿಗಳಿಗೆ ಅನ್ಯಾಯವಾಗಲಿದೆ. ಕೋವಿಡ್ -19 ಸಾಂಕ್ರಾಮಿಕವು ಎಲ್ಲರ ಮೇಲೆ ಪರಿಣಾಮ ಬೀರಿದೆ ಮತ್ತು ವಿನಾಯ್ತಿ ನೀಡುವುದರಿಂದ ಇತರ ಆಕಾಂಕ್ಷಿಗಳು ಇನ್ನೂ ಅನೇಕ ವಿನಂತಿಗಳನ್ನು ಆಹ್ವಾನಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
100 ಆಕಾಂಕ್ಷಿಗಳ ಗುಂಪಿನ ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲೆ ಅನುಶ್ರೀ ಪ್ರಶಿತ್ ಕಪಾಡಿಯಾ, ಗರಿಷ್ಠ ವಯಸ್ಸಿನ ಮಿತಿ ದಾಟಿದವರಿಗೆ ಒಂದು ಬಾರಿ ಹೆಚ್ಚು ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸದಿದ್ದರೆ ಅನ್ಯಾಯವಾಗುತ್ತದೆ ಎಂದು ವಾದಿಸಿದರು.
ನಿಯಮಗಳ ಪ್ರಕಾರ, ಸಾಮಾನ್ಯ ವರ್ಗದ ಅಭ್ಯರ್ಥಿಯು ಪರೀಕ್ಷೆಯನ್ನು ಗರಿಷ್ಠ ಆರು ಬಾರಿ ಅಥವಾ 32 ವರ್ಷ ವಯಸ್ಸಿನವರೆಗೆ ತೆಗೆದುಕೊಳ್ಳಬಹುದು. ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಪ್ರಯತ್ನ ಮತ್ತು ವಯಸ್ಸಿನ ವಿನಾಯ್ತಿ ಇದೆ.
ಕಳೆದ ವರ್ಷ, ಸಾಂಕ್ರಾಮಿಕ ರೋಗದಿಂದಾಗಿ, ವಾರ್ಷಿಕ ಪರೀಕ್ಷೆಯ ಪ್ರಾಥಮಿಕ ಪರೀಕ್ಷೆಯನ್ನು ಜೂನ್ ನಿಂದ ಅಕ್ಟೋಬರ್ ವರೆಗೆ ಮುಂದೂಡಲಾಗಿದ್ದರೆ, ಲಿಖಿತ ಪರೀಕ್ಷೆಯನ್ನು ಅಕ್ಟೋಬರ್ ನಿಂದ 2021 ರವರೆಗೆ ಮುಂದೂಡಲಾಗಿತ್ತು.






