ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ದರ ಏರಿಕೆ ಆಘಾತ ನೀಡಿದ್ದು, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಗುರುವಾರ ಪ್ರತಿ ಸಿಲಿಂಡರ್‌ಗೆ 25 ರೂ.ಗೆ ಏರಿಸಲಾಗಿದೆ.
ತೈಲ ಕಂಪನಿಗಳು ಈ ತಿಂಗಳಲ್ಲೇ ಮೂರು ಬಾರಿ ಎಲ್ ಪಿಜಿ ದರ ಏರಿಕೆ ಮಾಡಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್ನ ಬೆಲೆ 794 ರೂಪಾಯಿಗೆ ಮುಟ್ಟಿದೆ.
ಫೆ.4ರಂದು 25 ರೂ. ಫೆ. 15ರಂದು 50 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 25 ರೂಪಾಯಿ ಹೆಚ್ಚಿಸಲಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಸಿಲಿಂಡರ್ ಬೆಲೆ 794ಕ್ಕೆ ಏರಿಕೆಯಾಗಿದೆ. ಕೊಲ್ಕತ್ತಾದಲ್ಲಿ 820 ರೂ, ಮುಂಬೈನಲ್ಲಿ 794 ರೂ, ಚೆನ್ನೈನಲ್ಲಿ 810 ರೂ, ಹೈದರಾಬಾದ್ನಲ್ಲಿ 846.50 ರೂ ಆಗಿದೆ.
ಕಳೆದ ಡಿಸೆಂಬರ್ ನಿಂದ ಇಲ್ಲಿಯವರಿಗೆ ಎಲ್ ಪಿಜಿ ದರ 150 ರೂಪಾಯಿ ಹೆಚ್ಚಾಗಿದ್ದು, ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದ ಈ ಸಿಲಿಂಡರ್ ಬೆಲೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.





