ನವದೆಹಲಿ: ಕೊರೋನಾ ಲಸಿಕೆ ವ್ಯರ್ಥಮಾಡುತ್ತಿರುವ ರಾಜ್ಯಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ಮಿತಿಮೀರಿ ವ್ಯರ್ಥವಾಗುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸೂಚಿಸಿದರು.
ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಸಭೆ ನಡೆಸಿದ ಪ್ರಧಾನಿ, ಲಸಿಕೆ ವ್ಯರ್ಥ ಮಾಡುವುದನ್ನು ಕಡಿಮೆ ಮಾಡಲು ಸ್ಥಳೀಯ ಮಟ್ಟದಲ್ಲಿ ಯೋಜನೆ ಮತ್ತು ಆಡಳಿತದ ನ್ಯೂನತೆಗಳನ್ನು ತಕ್ಷಣ ಸರಿಪಡಿಸಿಕೊಳ್ಳುವ ಅಗತ್ಯವಿದೆ ಎಂದರು.
"ಲಸಿಕೆ ಏಕೆ ವ್ಯರ್ಥ ಮಾಡಲಾಗುತ್ತಿದೆ ಎಂಬುದನ್ನು ರಾಜ್ಯಗಳಲ್ಲಿ ಪರಿಶೀಲಿಸಬೇಕು. ಮಾನಿಟರಿಂಗ್ ಅನ್ನು ಪ್ರತಿ ಸಂಜೆ ಮಾಡಬೇಕು' ಎಂದು ಅವರು ಒತ್ತಿ ಹೇಳಿದರು.
ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಲಸಿಕೆ ವ್ಯರ್ಥ ಐದು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದೆ. ದೇಶದಲ್ಲಿ ಸರಾಸರಿ 6.5 ರಷ್ಟು ಲಸಿಕೆ ವ್ಯರ್ಥವಾಗುತ್ತಿದೆ. ಮೂರು ರಾಜ್ಯಗಳಲ್ಲಿ ಶೇ. 10ಕ್ಕಿಂತ ಹೆಚ್ಚು ಇದ್ದು, ತೆಲಂಗಾಣದಲ್ಲಿ ಅತಿ ಹೆಚ್ಚು ಅಂದರೆ ಶೇ.17 ರಷ್ಟು ಲಸಿಕೆ ವ್ಯರ್ಥವಾಗುತ್ತಿದೆ ಎಂದು ಮಾಹಿತಿ ನೀಡಿದರು.


