ನವದೆಹಲಿ: ಚಾರ್ಟೆಡ್ ಅಕೌಂಟೆಂಟ್ (ಸಿಎ) ಕಂಪನಿ ಸೆಕ್ರೆಟರಿ (ಸಿಎಸ್) ಅಥವಾ ಐಸಿಡಬ್ಲೂಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಇದೀಗ ಸ್ನಾತಕೋತ್ತರ ಪದವೀಧರರಿಗೆ ಸಮಾನರೆಂದು ಪರಿಗಣಿಸಬಹುದೆಂದು ಯುಜಿಸಿ ತಿಳಿಸಿದೆ.
ಸಿಎ, ಸಿಎಸ್ ಮತ್ತು ಐಸಿಡಬ್ಲೂಎಯನ್ನು ಸ್ನಾತಕೋತ್ತರ ಪದವಿಗೆ ಸಮನಾಗಿ ಪರಿಗಣಿಸುವಂತೆ ಇನ್ಸಿಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ ಆಫ್ ಇಂಡಿಯಾ, ಐಸಿಎಸ್ ಐ ಮತ್ತು ಇನ್ಸಿಟಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ ಆಫ್ ಇಂಡಿಯಾದಿಂದ ಮನವಿಗಳನ್ನು ಸ್ವೀಕರಿಸಿದ್ದಾಗಿ ಯುಜಿಸಿ ಅಧಿಕೃತ ಆದೇಶದಲ್ಲಿ ಹೇಳಿದೆ.
ಇದನ್ನು ಪರಿಗಣಿಸಿ ಯುಜಿಸಿಯಿಂದ ಸಮಿತಿಯೊಂದನ್ನು ರಚಿಸಲಾಗಿತ್ತು. ಆಯೋಗ ಸಮಿತಿಯ ಶಿಫಾರಸ್ಸನ್ನು ಪರಿಗಣಿಸಿ, ಸಿಎ, ಸಿಎಸ್ ಮತ್ತು ಐಸಿಡಬ್ಲುಎ ಅರ್ಹತೆಯನ್ನು ಸ್ನಾತಕೋತ್ತರ ಪದವಿಗೆ ಸಮಾನವೆಂದು ಪರಿಗಣಿಸಿರುವುದಾಗಿ ಅದು ತಿಳಿಸಿದೆ.
ಆಯೋಗದ ಈ ನಿರ್ಧಾರವನ್ನು ಐಸಿಎಐ ಸ್ವಾಗತಿಸಿ ಟ್ವೀಟ್ ಮಾಡಿದೆ. ಇದರಿಂದ ಸಿಎ ಉನ್ನತ ಶಿಕ್ಷಣ ಅಧ್ಯಯನ ಮಾಡುವ ಅಭ್ಯರ್ಥಿಗಳಿಗೆ ನೆರವಾಗುವುದರ ಜೊತೆಗೆ ಜಾಗತಿಕವಾಗಿಯೂ ಭಾರತೀಯ ಸಿಎ ಅಭ್ಯರ್ಥಿಗಳ ಚಲನಶೀಲತೆಗೆ ಸಹಕಾರಿಯಾಗಲಿದೆ ಎಂದಿದೆ.



