ಬದಿಯಡ್ಕ: ಕೃಷಿಕರಿಗೆ ಅಗತ್ಯವುಳ್ಳ, ಮಾನವ ಶ್ರಮ ಉಳಿಸುವ ವಿವಿಧ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಾಗಾರವು ಮಂಗಳವಾರ ಬದಿಯಡ್ಕ ಸಮೀಪದ ಕೆಡೆಂಜಿ ನರಸಿಂಹ ಭಟ್ಟರ ಮನೆಯ ಪರಿಸರದಲ್ಲಿ ನಡೆಯಿತು.
ಅಡಿಕೆ ಮರವೇರುವ ಯಂತ್ರ(ಕ್ಲೈಂಬಿಂಗ್ ಬೈಕ್), ರಿಮೋಟ್ ಕಂಟ್ರೋಲ್ ಚಾಲಿತ ಸ್ಪ್ರೇಯರ್, ಗುಂಡಿ ತೋಡುವ ಯಂತ್ರ, ಮೋಟೋ ಕಾರ್ಟ್, ಅಡಿಕೆ ಸುಲಿಯುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರ, ಚಾಪ್ ಕಟ್ಟರ್ ಮೊದಲಾದವುಗಳನ್ನು ಬದಿಯಡ್ಕ ಸಾಯ ಎಂಟರ್ ಪ್ರೈಸಸ್‍ನ ನೇತೃತ್ವದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋವಿಂದ್ ಪ್ರಕಾಶ್ ಸಾಯ, ದೀಪಕ್ ಅಜ್ಜರಕೋಡಿ ಯಂತ್ರದ ಕಾರ್ಯನಿರ್ವಹಣೆ, ಸರ್ಕಾರದಿಂದ ಲಭಿಸುವ ಸಹಾಯ ಧನದ ಬಗ್ಗೆ ಮಾಹಿತಿ ನೀಡಿದರು. ಕೃಷಿತಜ್ಞ ಚಂದ್ರಶೇಖರ ಏತಡ್ಕ ಕೃಷಿಗೆ ಬಳಸುವ ಅತ್ಯಾಧುನಿಕ ರೀತಿಯ ಗೊಬ್ಬರದ ಕುರಿತು ಮಾಹಿತಿಯನ್ನು ನೀಡಿದರು. ಹಿರಿಯ ಕೃಷಿಕ ಕೆಡೆಂಜಿ ನರಸಿಂಹ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ತಮ್ಮ ಅನುಭವವನ್ನು ಹಂಚಿಕೊಂಡರು. ಕೃಷಿಕ ರಾಜಗೋಪಾಲ ಚುಳ್ಳಿಕ್ಕಾನ ಸ್ವಾಗತಿಸಿ, ಕೆಡೆಂಜಿ ಪರಮೇಶ್ವರ ಪ್ರಸಾದ್ ವಂದಿಸಿದರು. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಪಡೆದ ವಿವಿಧ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


