ಬದಿಯಡ್ಕ: ಅಧ್ಯಾಪಕ ವೃತ್ತಿ ಎಂಬುದು ಶ್ರೇಷ್ಠ ಉದ್ಯೋಗ. ಗುರಿ ತೋರುವ ಗುರುವಾಗಿ ನಾವು ಮಕ್ಕಳನ್ನು ಮುನ್ನಡೆಸಬೇಕು ಎಂಬುದಾಗಿ ಕುಂಬಳೆ ಉಪಜಿಲ್ಲಾ ನಿವೃತ್ತ ಶಿಕ್ಷಣಾಧಿಕಾರಿ ಪೆರ್ಮುಖ ವೆಂಕಟ್ರಮಣ ಭಟ್ ಹೇಳಿದರು.
ಅವರು ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಕುಂಬಳೆ ಉಪಜಿಲ್ಲಾ ಘಟಕದ ಮಹಾಸಭೆ ಮತ್ತು ವಿದಾಯಕೂಟವನ್ನು ಉದ್ಘಾಟಿಸಿ ಮಾತಾಡಿದರು.
ವೃತ್ತಿಯಿಂದ ನಿವೃತ್ತರಾದರೂ ಸಮಾಜಸೇವೆಯಿಂದ ನಿವೃತ್ತರಾಗದೇ ಜೀವನವನ್ನು ಉತ್ತಮಗೊಳಿಸಬಹುದು ಎಂದು ಅವರು ಹೇಳಿದರು.
ಕೇಂದ್ರ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಕೆ ಆರ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಕುಂಬಳೆ ಉಪಜಿಲ್ಲಾ ಬಿಪಿಒ ಶಿವರಾಮ ಅವರು ಶುಭ ಹಾರೈಸಿದರು. ಜ್ಯೋತ್ಸ್ನಾ ಕಡಂದೇಲು ಪ್ರಾರ್ಥನೆ ಹಾಡಿದರು. ಅಂಕಿತ ಸ್ವಾಗತಿಸಿ,ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ವಂದಿಸಿದರು.
ಈ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುವ ಕನ್ನಡ ಮಾಧ್ಯಮ ಅಧ್ಯಾಪಕರಾದ ಶ್ರೀಹರಿ ಭಟ್ ಅಗಲ್ಪಾಡಿ, ಮಧುಸೂದನ ಶೇಣಿ, ವೆಂಕಟ್ರಾಜ ನೀರ್ಚಾಲು, ಜನಾರ್ಧನ ನಾಯ್ಕ್ ಬಾಳೆಮೂಲೆ, ರಾಮಚಂದ್ರ ಭಟ್ ಕುಂಬಳೆ, ರಾಮಣ್ಣ ಡಿ ದೇಲಂಪಾಡಿ, ಶ್ರೀರಾಮ ಭಟ್, ರಾಮಚಂದ್ರ ಮಣಿಯಾಣಿ, ಸುಶೀಲ ಏತಡ್ಕ, ಸರಸ್ವತಿ ಶೇಣಿ, ಸುಧೀರ್ ಕುಮಾರ್ ರೈ ಅವರನ್ನು ಗೌರವಿಸಲಾಯಿತು.
ಬಳಿಕ ಕುಂಬಳೆ ಉಪಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಅವರ ಅಧ್ಯಕ್ಷತೆಯಲ್ಲಿ ಪ್ರತಿನಿಧಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಶ್ರೀಶ ಕುಮಾರ ವರದಿವಾಚಿಸಿದರು. ಕೋಶಾಧಿಕಾರಿ ಶರತ್ ಕುಮಾರ್ ಲೆಕ್ಕಪತ್ರ ಮಂಡಿಸಿದರು. ಸಮಿತಿಯ ಚಟುವಟಿಕೆಗಳ ಅವಲೋಕನದ ಬಳಿಕ ಸಮಿತಿಯಲ್ಲಿರುವ ಈ ವರ್ಷ ನಿವೃತ್ತರಾಗುವ ಅಧ್ಯಾಪಕರ ಬದಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಕೇಂದ್ರ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಕೆ ಆರ್, ಕೇಂದ್ರ ವಕ್ತಾರ ವಿಶಾಲಾಕ್ಷ ಪುತ್ರಕಳ, ಸದಸ್ಯೆ ಪ್ರಭಾವತಿ ಕೆದಿಲಾಯ ಪುಂಡೂರು ಉಪಸ್ಥಿತರಿದ್ದರು. ಉಪಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್ ಕುಮಾರ್ ವಂದಿಸಿದರು. ರಾಜೇಶ್ ಉಬ್ರಂಗಳ ಹಾಗೂ ಶ್ಯಾಮಲ ಮವ್ವಾರು ನಿರೂಪಿಸಿದರು.







