ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರ ಹಾಗೂ ಎಸ್.ಎಸ್.ಕೆ.ಕಾಸರಗೋಡು ಇದರ ಸಹಭಾಗಿತ್ವದಲ್ಲಿ ಮಂಜೇಶ್ವರ ಸಿ.ಇ.ಸಿ.ಮಟ್ಟದ ಗಣಿತ ಲ್ಯಾಬ್-ಹೋಂ ಎಂಬ ವಿಶೇಷ ಕಾರ್ಯಾಗಾರ ಮಂಜೇಶ್ವರ ವೆಲ್ಪೇರ್ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ವೆಲ್ಪೇರ್ ಶಾಲಾ ಮುಖ್ಯೋಪಾಧ್ಯಾಯ ಸುಕೇಶ್ ಮಾಸ್ತರ್ ಉದ್ಘಾಟಿಸಿ ಮಾತನಾಡಿ, ಗಣಿತ ವಿಷಯವನ್ನು ಚಟುವಟಿಕೆಯಾಧಾರಿತವಾಗಿ ಕಲಿತರೆ ಅದು ಮಕ್ಕಳ ಮನಸ್ಸಿಗೆ ಸುಲಲಿತವಾಗಿ ಅರ್ಥೈಸುವ ಸಾಮಥ್ರ್ಯವಾಗಿ ಮೂಡಿಬರುತ್ತದೆ. ಜೀವನದ ಪ್ರತಿಕ್ಷಣವೂ ಗಣಿತ ವಿಷಯಕ್ಕೆ ಸಂಬಂಧಿಸಿದ ಆಶಯಕ್ಕೆ ಹೊಂದಿಕೊಂಡ ಘಟನೆಗಳು ಜರಗುತ್ತಿರುತ್ತದೆ. ಅದು ಜೀವನಕ್ಕೆ ಪಾಠವನ್ನು ತೋರಿಸುತ್ತದೆ ಎಂದು ತಿಳಿಸಿದರು.
ಮಂಜೇಶ್ವರ ಬ್ಲಾಕ್ ಸಂಪನ್ಮೂಲ ಕೇಂದ್ರದ ನಿರೂಪಣಾಧಿಕಾರಿ ಪ್ರಸನ್ನ ಟೀಚರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಿ.ಇ.ಸಿ.ಪಂಚಾಯತಿ ವ್ಯಾಪ್ತಿಯ ವಿವಿಧ ಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದರು. ಎಸ್.ಎ.ಟಿ.ಶಾಲಾ ಮುಖ್ಯೋಪಾಧ್ಯಾಯ ತೇಜಸ್ ಕಿರಣ್ ಶುಭಹಾರೈಸಿದರು. ಸಂಪನ್ಮೂಲ ವ್ಯಕ್ತಿ ಅಶೋಕ ಮಾಸ್ತರ್ ಕೊಡ್ಲಮೊಗರು ಸ್ವಾಗತಿಸಿ, ರೇಷ್ಮ ಟೀಚರ್ ವಂದಿಸಿದರು. ಜಬ್ಬಾರ್ ಮಾಸ್ತರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗಣಿತ ಸಂಬಂಧಿ ವಿವಿಧ ಕಲಿಕೋಪಕರಣಗಳ ನಿರ್ಮಾಣ ಚಟುವಟಿಕೆ ನಡೆಯಿತು.





