ಕೊಲ್ಲಂ: ಕೊಲ್ಲಂನ ಖಾಸಗಿ ಆಸ್ಪತ್ರೆಯ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಕೊವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದು ಸುಮಾರು ಎರಡು ವಾರಗಳ ನಂತರ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಮಾರ್ಚ್ 3 ರಂದು ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದಿದ್ದ ಆರೋಗ್ಯ ಕಾರ್ಯಕರ್ತೆ, ಎರಡು ದಿನಗಳ ಹಿಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ.
ಕೆಲವು ವಾರಗಳ ಹಿಂದೆ ಕೊಲ್ಲಂನಿಂದ ಇದೇ ರೀತಿಯ ಪ್ರಕರಣ ವರದಿಯಾಗಿತ್ತು. 40 ವರ್ಷದ ವೈದ್ಯೆಯೊಬ್ಬರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ ನಂತರವೂ ಸೋಂಕು ದೃಢಪಟ್ಟಿತ್ತು.
ವೈದ್ಯೆಯ ಸೋಂಕಿನ ಮೂಲ ಆಕೆಯ ಪತಿಯಾಗಿದ್ದು, ಇತ್ತೀಚಿನ ಪ್ರಕರಣದ ಸೋಂಕಿನ ಮೂಲ ಇನ್ನೂ ಗುರುತಿಸಲಾಗಿಲ್ಲ.ಇಬ್ಬರೂ ರೋಗಿಗಳು ಆರೋಗ್ಯ ಸ್ಥಿರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೆಲವೇ ಕೆಲವು ಪ್ರಕರಣಗಳಲ್ಲಿ ಲಸಿಕೆ ಪರಿಣಾಮಕಾರಿಯಾಗಿರುವುದಿಲ್ಲ. ಜನ ಭಯಪಡುವ ಅಥವಾ ಲಸಿಕೆ ಪರಿಣಾಮಕಾರಿ ಅಲ್ಲ ಎಂದು ತೀರ್ಮಾನಿಸಬಾರದು ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
"ಬದಲಾಗಿ, ಲಸಿಕೆಗಳು ತ್ವರಿತವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದುಕೊಂಡು ಸಾರ್ವಜನಿಕರು ಇದನ್ನು ತೆಗೆದುಕೊಳ್ಳಬೇಕು. ಆರಂಭಿಕ ರೋಗನಿರೋಧಕ ಪ್ರತಿಕ್ರಿಯೆಗೆ ಇದು 15 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ" ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.






