ತಿರುವನಂತಪುರಂ: ಪಿ.ಸಿ. ಥಾಮಸ್ ನೇತೃತ್ವದ ಕಾಂಗ್ರೆಸ್ ಬಣ, ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಮೈತ್ರಿ ಮುರಿದುಕೊಳ್ಳಲು ನಿರ್ಧರಿಸಿರುವುದಾಗಿ ಘೋಷಿಸಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಂದು ಸ್ಥಾನ ನೀಡಲೂ ಎನ್‌ಡಿಎ ನಿರಾಕರಿಸಿದ ಕಾರಣ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಎನ್‌ಡಿಎ ನಡೆಯನ್ನು ವಿರೋಧಿಸಿ ಮೈತ್ರಿ ತೊರೆಯುತ್ತಿದ್ದು, ಕೇರಳ ಕಾಂಗ್ರೆಸ್- ಜೋಸೆಫ್ ಬಣದೊಂದಿಗೆ ವಿಲೀನವಾಗುವುದಾಗಿ ತಿಳಿಸಿದೆ.
"ನಮಗೆ ಸ್ಥಾನ ನೀಡದೆ ಬಿಜೆಪಿ ನಮ್ಮ ಪಕ್ಷಕ್ಕೆ ಅವಮಾನ ಮಾಡಿದೆ" ಎಂದು ಥಾಮಸ್ ಹೇಳಿದ್ದು, "ನಾವು ನಾಲ್ಕು ಸ್ಥಾನಗಳನ್ನು ಕೇಳಿದ್ದೆವು. ಆದರೆ ಬಿಜೆಪಿ ಅದಕ್ಕೆ ನಿರಾಕರಿಸಿದೆ. ನಾನು ಪಾಲಾದಿಂದ ಸ್ಪರ್ಧಿಸಬೇಕೆಂದು ಬಿಜೆಪಿ ನಾಯಕರು ಬಯಸಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ನಾನು ಆ ಸ್ಥಾನ ನಿರಾಕರಿಸಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಈ ಬಾರಿ ಬಿಜೆಪಿ ಒಂದು ಸೀಟನ್ನೂ ನೀಡಿಲ್ಲ. ಎನ್‌ಡಿಎ ಜೊತೆ ಮುಂದುವರೆಯದಿರಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.
ಪ್ರಸ್ತುತ ಯುಡಿಎಫ್ ಮೈತ್ರಿಯಲ್ಲಿರುವ ಜೋಸೆಫ್ ಬಣ ತಮ್ಮ ಕೇರಳ ಕಾಂಗ್ರೆಸ್‌ನೊಂದಿಗೆ ವಿಲೀನಗೊಳ್ಳಲಿದೆ. ವಿಲೀನದ ನಂತರ ಪಕ್ಷಕ್ಕೆ ಯಾವುದೇ ಹೊಸ ಹೆಸರಿನ ಅಗತ್ಯವಿಲ್ಲ. ಯುಡಿಎಫ್ ಅಭ್ಯರ್ಥಿಗಳಾಗಿ ಸ್ಪರ್ಧಿಸುವ ಜೋಸೆಫ್ ಬಣದ ಹತ್ತು ಅಭ್ಯರ್ಥಿಗಳನ್ನು ಕೇರಳ ಕಾಂಗ್ರೆಸ್ ಅಭ್ಯರ್ಥಿಗಳು ಎಂದು ಕರೆಯಲಾಗುತ್ತದೆ ಎಂದರು.





