ತಿರುವನಂತಪುರ: ಕ್ಷಯರೋಗ ತಡೆಗಟ್ಟುವ ಚಟುವಟಿಕೆಗಳ ಮೂಲಕ ಕ್ಷಯ ರೋಗವನ್ನು ನಿಯಂತ್ರಿಸಿದ ರಾಜ್ಯಗಳಿಗೆ ಕೊಡಮಾಡುವ ಪ್ರಶಸ್ತಿಗೆ ಈ ವರ್ಷ ಕೇರಳ ಭಾಜನವಾಗಿದೆ. ಜೊತೆಗೆ ಪ್ರಸ್ತುತ ಸಾಲಿನಲ್ಲಿ ಈ ಪ್ರಶಸ್ತಿಗೆ ಅರ್ಹವಾದ ಏಕೈಕ ರಾಜ್ಯ ಕೇರಳ.
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಭಾಗವಾಗಿ ಕಳೆದ ಐದು ವರ್ಷಗಳಲ್ಲಿ 37.5 ಶೇ. ಕ್ಷಯರೋಗಿಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿ ಕುಸಿತ ಕಂಡುಬಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಅವಲೋಕನ ನಡೆಸಿ ಈ ಪ್ರಶಸ್ತಿಗೆ ರಾಜ್ಯವನ್ನು ಆಯ್ಕೆಮಾಡಿತು. ಕೇರಳದಲ್ಲಿ ಕ್ಷಯರೋಗ ಸಂಶೋಧನಾ ವ್ಯವಸ್ಥೆ ರಾಷ್ಟ್ರಮಟ್ಟದಲ್ಲೇ ಮಾದರಿಯಾದುದು ಎಂದು ತಜ್ಞರ ಸಮಿತಿ ಹೇಳಿದೆ.
ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ, ವಿಶ್ವ ಆರೋಗ್ಯ ಸಂಸ್ಥೆ, ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ಎಂಬ ಸಂಸ್ಥೆಗಳ 26 ಮಂದಿ ಸದಸ್ಯರಿದ್ದ ಉನ್ನತ ಮಟ್ಟದ ತಜ್ಞರ ಸಮಿತಿ ಎರ್ನಾಕುಳಂ, ಮಲಪ್ಪುರಂ, ಕಾಸರಗೋಡು ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಸಂದರ್ಶನ ನಡೆಸಿ ಸಮರ್ಪಿಸಿದ ವರದಿಯ ಅನುಸಾರ ಈ ಪ್ರಶಸ್ತಿಗೆ ರಾಜ್ಯ ಆಯ್ಕೆಯಾಯಿತು.
ಇದು 60 ಸಮೀಕ್ಷಾ ತಂಡಗಳ ಸಹಾಯದಿಂದ 83,000 ಜನರ ಸಮೀಕ್ಷೆ ನಡೆಸಲಾಗಿತ್ತು. ಜೊತೆಗೆ ಖಾಸಗಿ ವಲಯದ ವೈದ್ಯರು ಮತ್ತು ಔಷಧಿ ಅಂಗಡಿಗಳೊಂದಿಗೆ ತಜ್ಞರ ಸಮಿತಿ ಚರ್ಚೆ ನಡೆಸಿತ್ತು.





