ನವದೆಹಲಿ: ಭಾರತದಲ್ಲಿ ಕೊರೋನಾ 2ನೇ ಅಲೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅನೇಕ ಮಂದಿ ಗಣ್ಯ ವ್ಯಕ್ತಿಗಳಿಗೂ ಸೋಂಕು ತಗುಲುತ್ತಿದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 1 ಲಕ್ಷದ 03 ಸಾವಿರದ 558 ಹೊಸ ಕೊರೋನಾ ಪ್ರಕರಣ ವರದಿಯಾಗಿದೆ. ಒಂದೇ ದಿನ 478 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 1 ಲಕ್ಷದ 65 ಸಾವಿರದ 101ಕ್ಕೆ ಏರಿಕೆಯಾಗಿದೆ.
ದೇಶದಲ್ಲಿ ಇಲ್ಲಿಯವರೆಗೆ ಒಟ್ಟು 1 ಕೋಟಿಯ 25 ಲಕ್ಷದ 89 ಸಾವಿರದ 067 ಪ್ರಕರಣಗಳು ವರದಿಯಾಗಿದ್ದು, ಸದ್ಯ 7 ಲಕ್ಷದ 41 ಸಾವಿರದ 830 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಗಳಲ್ಲಿ 52,847 ಮಂದಿ ಗುಣಮುಖರಾಗಿದ್ದು, ದೇಶದಲ್ಲಿ ಈವರೆಗು ಒಟ್ಟಾರೆ 1,16,82,136 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ಈ ಮಧ್ಯೆ ದೇಶದಲ್ಲಿ ನಿನ್ನೆ ಒಂದೇ ದಿನ 8,93,749 ಮಂದಿಯನ್ನು ಕೊರೋನಾ ಪರೀಕ್ಷೆಗೊಳಪಡಿಸಲಾಗಿದ್ದು, ಈವರೆಗೂ ದೇಶದಲ್ಲಿ 24,90,19,657 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಕೋವಿಡ್-19 ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 7,91,05,163 ಮಂದಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

