ನವದೆಹಲಿ: ಛತ್ತೀಸ್ ಘಡದಲ್ಲಿ ನಡೆದ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ 22 ಮಂದಿ ಸೈನಿಕರು ಹುತಾತ್ಮರಾದ ಬೆನ್ನಲ್ಲೇ ಇದೇ ಕಾರ್ಯಾಚರಣೆಯಲ್ಲಿ ಸುಮಾರು 25-30 ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್)ಯ ಮಹಾನಿರ್ದೇಶಕ ಮುಖ್ಯಸ್ಥ ಕುಲದೀಪ್ ಸಿಂಗ್ ಅವರು ಮಾಹಿತಿ ನೀಡಿದ್ದು, ' ನಕ್ಸಲರ ವಿರುದ್ಧ ಕಾರ್ಯಾಚರಣೆ ಅಥವಾ ಗುಪ್ತಚರ ವೈಫ್ಯಲ್ಯವಾಗಿಲ್ಲ, 25ರಿಂದ 30 ನಕ್ಸಲರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛತ್ತೀಸ್ ಘಡದಲ್ಲಿ ನಕ್ಸಲ್ ದಾಳಿಯ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿರುವ ಕುಲ್‌ದೀಪ್ ಸಿಂಗ್ ಅವರು, 'ಭದ್ರತಾ ಪಡೆಯ ಕಾರ್ಯಾಚರಣೆಯಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ನಿಖರ ಮಾಹಿತಿ ಕಲೆ ಹಾಕಲಾಗುತ್ತಿದೆ. ಗುಪ್ತಚರ ಅಥವಾ ಕಾರ್ಯಾಚರಣೆಯಲ್ಲಿ ವೈಫಲ್ಯವಾಗಿದೆ ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಇದು ಕೇವಲ ಗುಪ್ತಚರ ವೈಫಲ್ಯವಾಗಿದ್ದರೆ, ಕಾರ್ಯಾಚರಣೆಯನ್ನು ಕೈಗೊಳ್ಳುತ್ತಿರಲಿಲ್ಲ. ಹಾಗೆಯೇ ಕಾರ್ಯಾಚರಣೆ ವೈಫಲ್ಯವಾಗಿದ್ದರೆ ಅನೇಕ ನಕ್ಸಲರು ಬಲಿಯಾಗುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶವಗಳ ಸಾಗಿಸಲು ಟ್ರಾಕ್ಯರ್ ಬಳಸಿದ ನಕ್ಸಲರು:
ಇದೇ ವೇಳೆ ಕಾರ್ಯಾಚರಣೆಯಲ್ಲಿ ಹತರಾದ ಮತ್ತು ಗಾಯಗೊಂಡವರನ್ನು ಸಾಗಿಸಲು ನಕ್ಸಲರು ಟ್ರಾಕ್ಟರ್ ಗಳನ್ನು ಬಳಕೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹತರಾಗಿರುವ ಮತ್ತು ಗಾಯಾಳುಗಳ ದೇಹಗಳನ್ನು ಸ್ಥಳದಿಂದ ಸಾಗಿಸಲು ಮೂರು ಟ್ರ್ಯಾಕ್ಟರ್‌ಗಳನ್ನು ನಕ್ಸಲರು ಬಳಸಿದ್ದರು. ಕಾರ್ಯಾಚರಣೆಯಲ್ಲಿ ಎಷ್ಟು ನಕ್ಸಲರು ಹತರಾಗಿದ್ದಾರೆಂದು ನಿಖರವಾಗಿ ಹೇಳುವುದು ಕಷ್ಟ. ಅದರೆ ಕನಿಷ್ಠ 25-30 ನಕ್ಸಲರು ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ಗಾಯಾಳು ಸೈನಿಕರ ಭೇಟಿ:
ಇದೇ ವೇಳೆ ನಕ್ಸಲ್ ಕಾರ್ಯಾಚರಣೆಯ ವೇಳೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೈನಿಕರನ್ನು ಸೋಮವಾರ ಭೇಟಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

