ಕಾಸರಗೋಡು: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಎದುರಾಗಿದ್ದು, ರೋಗಿಗಳು ಆತಂಕಿತರಾಗಿದ್ದಾರೆ. ಆಕ್ಸಿಜನ್ ಕೊರತೆಯಿಂದ ಕಾಸರಗೋಡು ನಗರದ ಎರಡು ಆಸ್ಪತ್ರೆಗಳಿಂದ ರೋಗಿಗಳು ಸ್ವಯಂ ಡಿಸ್‍ಚಾರ್ಜ್ ಆಗಿ ತೆರಳುವ ಸ್ಥಿತಿ ಎದುರಾಗಿದೆ. ಜಿಲ್ಲೆಗೆ ತುರ್ತಾಗಿ ಆಮ್ಲಜನಕ ಪೂರೈಸಲು ರಾಜ್ಯ ವಾರ್ ರೂಂನಿಂದ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಆಗ್ರಹಿಸಿದ್ದಾರೆ. ದ.ಕ ಜಿಲ್ಲೆಯಿಂದ ಕಾಸರಗೋಡಿಗೆ ಆಮ್ಲಜನಕ ವಿತರಣೆಯಾಗುತ್ತ್ತಿದುದ್ದು, ಕಳೆದ ಮೂರು ದಿನಗಳಿಂದ ಆಕ್ಸಿಜನ್ ಪೂರೈಕೆ ಸ್ಥಗಿತಗೊಂಡಿರುವುದರಿಂದ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಕರ್ನಾಟಕ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಗೆ ಹೆಚ್ಚಿನ ಪ್ರಮಾಣದ ಆಕ್ಸಿಜನ್ ಪೂರೈಕೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಗಮನಹರಿಸುವಂತೆಯೂ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.
ಆರ್‍ಟಿಪಿಸಿಆರ್ ತಪಾಸಣೆ ಕಡಿತ:
ಕೋವಿಡ್ ರೋಗ ಖಚಿತಪಡಿಸಲು ಸರ್ಕಾರದ ವತಿಯಿಂದ ನಡೆಸಲಾಗುತ್ತಿದ್ದ ಆರ್‍ಟಿಪಿಸಿಆರ್ ತಪಾಸಣೆ ಏಕಾಏಕಿ ಕಡಿತಗೊಳಿಸಿರುವುದರಿಂದ ಖಾಸಗಿ ಆಸ್ಪತ್ರೆಗಳು ಇದರ ಲಾಭ ಕೊಯ್ಯಲು ಆರಂಭಿಸಿದೆ. ಖಾಸಗಿ ಆಸ್ಪತ್ರೆಗಳಿಗೆ ದಾಖಲಾತಿಗಾಗಿ ಆಗಮಿಸುವ ರೋಗಿಗಳಿಗೆ ಹಾಗೂ ರೋಗ ತಪಾಸಣೆಗೆ ಆಗಮಿಸುವವರಿಗೆ ಆರ್‍ಟಿಪಿಸಿಆರ್ ಬದಲಾಗಿ ಹೆಚ್ಚಿನ ಮೊತ್ತದ ಟ್ರುನಾಟ್ ತಪಾಸಣೆ ನಡೆಸುತ್ತಿರುವುದು ಜನಸಾಮಾನ್ಯರಿಗೆ ಹೆಚ್ಚಿನ ಸಮಸ್ಯೆಯುಂಟಾಗಿದೆ. ಆರ್‍ಟಿಪಿಸಿಆರ್ ತಪಾಸಣೆ ಕಡಿತಗೊಳಿಸಿರುವುದರಿಂದ ರೋಗಿಗಳು ಅನಿವಾರ್ಯವಾಗಿ ಹೆಚ್ಚಿನ ಮೊತ್ತದ ಟ್ರುನಾಟ್ ತಪಾಸಣೆಗೊಳಗಾಗಬೇಕಾಗುತ್ತಿದೆ. ಆರ್‍ಟಿಪಿಸಿಆರ್ ತಪಾಸಣೆಗೆ ಸರ್ಕಾರ ನಿಗದಿಪಡಿಸಿರುವ ಮೊತ್ತ 500ರೂ. ಆಗಿದ್ದರೆ, ಟುನಾಟ್ ತಪಾಸಣೆಗೆ 1500 ರೂ.ಗೂ ಹೆಚ್ಚು ಖರ್ಚಾಗುತ್ತಿದೆ.



