ಕಾಸರಗೋಡು: ಕೋವಿಡ್ ಕಟ್ಟುನಿಟ್ಟಿನ ನಿಯಂತ್ರಣದ ನಡುವೆಯೂ ಕಾಸರಗೋಡು ನಗರದಲ್ಲಿ ವ್ಯಾಕ್ಸಿನ್ ಸ್ವೀಕರಿಸಲು ಸೇರಿದ್ದ ಜನದಟ್ಟಣೆ ಆತಂಕಕ್ಕೆ ಕಾರಣವಾಗಿದೆ. ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಸೋಮವಾರ ಬೆಳಗ್ಗೆ ಆರಂಭಗೊಂಡ ವ್ಯಾಕ್ಸಿನ್ ವಿತರಣಾ ಕಾರ್ಯಕ್ರಮದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ವ್ಯಾಕ್ಸಿನ್‍ನ ಎರಡನೇ ಹಂತದ ಲಸಿಕೆ ಪಡೆಯಲು ಜನರು ಒಟ್ಟುಸೇರಿದ್ದು, ಸಾಮಾಜಿಕ ಅಂತರ ಪಾಲಿಸುವಂತೆ ಸಂಬಂಧಪಟ್ಟವರು ಮಾಡಿಕೊಂಡ ಮನವಿಗೂ ಬೆಲೆಯಿಲ್ಲದಾಗಿತ್ತು. ಸೋಮಾವರ ಒಂದೇ ದಿನ 300ಮಂದಿಗೆ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಅಸೌಖ್ಯಪೀಡಿತರು, ವೃದ್ಧರೂ ಸರತಿಸಾಲಲ್ಲಿ ನಿಂತು ವ್ಯಾಕ್ಸಿನ್ ಪಡೆದುಕೊಂಡರು. ಆನ್‍ಲೈನ್ ಹಾಗೂ ಸ್ಪಾಟ್ ನೋಂದಾವಣೆ ನಡೆಸಿದವರಿಗೂ ವ್ಯಾಕ್ಸಿನ್ ವಿತರಿಸಲಾಯಿತು.

