ತಿರುವನಂತಪುರ: ಕೇರಳದ ಕ್ರಾಂತಿಕಾರಿ ನಾಯಕಿ, ಮೊತ್ತಮೊದಲ ಕಮ್ಯೂನಿಸ್ಟ್ ಸಚಿವ ಸಂಪುಟದ ಮೊದಲ ಮಹಿಳಾ ಸಚಿವೆ, ಶತಾಯುಷಿ ಕೆ.ಆರ್. ಗೌರಿಯಮ್ಮ(101)ದೀರ್ಘ ಕಾಲದ ಅಸೌಖ್ಯದಿಂದ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಈಳವ ಸಮುದಾಯದ ಪ್ರಮುಖ ನೇತಾರೆಯಾಗಿ, ಕೇರಳದ ರಾಜಕೀಯದಲ್ಲಿ ಪ್ರಸಿದ್ಧಿ ಪಡೆದ ಕೆ.ಆರ್ ಗೌರಿಯಮ್ಮ ರಾಜ್ಯ ರಾಜಕೀಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಬಿ.ಎ, ಬಿ.ಎಲ್ ಪದವೀಧರೆಯಾಗಿದ್ದ ಗೌರಿಯಮ್ಮ 1957ರ ಮೊತ್ತ ಮೊದಲ ಕಮ್ಯೂನಿಸ್ಟ್ ಸರ್ಕಾರದಲ್ಲಿ ಕಂದಾಯ ಸಚಿವೆಯಾಗಿದ್ದರು. 1952ರಿಂದ 1956ರ ವರೆಗೆ ತಿರುವಾಂಕೂರು-ಕೊಚ್ಚಿ ವಿಧಾನಸಭೆ ಹಾಗೂ ಕೇರಳ ರಾಜ್ಯ ರಚನೆಯಾದ ನಂತರ 1957ರಿಂದ ಐದನೇ ವಿಧಾನಸಭೆ ಹೊರತುಪಡಿಸಿ, ಕೇರಳ ಹನ್ನೊಂದು ವಿಧಾನಸಭಾ ಚುನಾವಣೆಗಳಲ್ಲೂ ಸತತ ಗೆಲುವು ಸಾಧಿಸಿಕೊಂಡು ಬಂದಿದ್ದರು. 1957ರಿಂದ 1987ರ ವರೆಗೆ ಕಮ್ಯೂನಿಸ್ಟ್ ಸರ್ಕಾರ ಹಾಗೂ 2001ರಿಂದ ಎ.ಕೆ ಆಂಟನಿ ಹಾಗೂ ಊಮನ್‍ಚಾಂಡಿ ನೇತೃತ್ವದ ಐಕ್ಯರಂಗ ಸರ್ಕಾರದಲ್ಲಿ ಪ್ರತಿನಿಧಿಯಾಗಿದ್ದರು. ಒಟ್ಟು ಹದಿಮೂರು ಬಾರಿ ಶಾಸಕಿಯಾಗಿ, ಆರು ಬಾರಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ. ಕಮ್ಯೂನಿಸ್ಟ್ ಸಚಿವ ಸಂಪುಟ ಸದಸ್ಯರಾಗಿದ್ದ ಟಿ.ವಿ ಥಾಮಸ್ ಅವರನ್ನು ಕೆ.ಆರ್. ಗೌರಿಯಮ್ಮ 1957ರಲ್ಲಿ ವಿವಾಹಿತರಾಗಿದ್ದರು. 1994ರಲ್ಲಿ ಸಿಪಿಎಂನಿಂದ ಹೊರಬಂದ ಗೌರಿಯಮ್ಮ ಜೆಎಸ್‍ಎಸ್(ಜನಾಧಿಪತ್ಯ ಸಂರಕ್ಷಣಾ ಸಮಿತಿ)ಎಂಬ ಹೊಸ ಪಕ್ಷ ರಚಿಸಿಕೊಂಡಿದ್ದರು. ನಂತರ ಐಕ್ಯರಂಗ ಪಾಳಯದಲ್ಲಿದ್ದ ಜೆಎಸ್‍ಎಸ್ 2016ರಲ್ಲಿ ಮತ್ತೆ ಎಡರಂಗದೊಂದಿಗೆ ಗುರುತಿಸಿಕೊಂಡಿತ್ತು.


