ಮುಂಬೈ: 'ಪೆಗಾಸಸ್ ಸಾಫ್ಟ್‌ವೇರ್ ಮೂಲಕ ಪತ್ರಕರ್ತರು ಮತ್ತು ರಾಜಕಾರಣಿಗಳು ಸೇರಿದಂತೆ ದೇಶದ ವಿವಿಧ ವರ್ಗಗಳ ಜನರ ಮೇಲೆ ಕಣ್ಗಾವಲು ನಡೆಸಲು ಹಣ ನೀಡಿದ್ದು ಯಾರು ಎನ್ನುವುದು ಬಹಿರಂಗವಾಗುವುದು ಅಗತ್ಯವಿದೆ' ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಒತ್ತಾಯಿಸಿದ್ದಾರೆ.
ಶಿವಸೇನಾದ ಮುಖವಾಣಿ 'ಸಾಮ್ನಾ'ದಲ್ಲಿನ ವಾರದ ಅಂಕಣ 'ರೋಖ್‌ಠೋಕ್'ನಲ್ಲಿ ಪೆಗಾಸಸ್ ಗೂಢಚರ್ಚೆಯನ್ನು ಹಿರೋಶಿಮಾ ಬಾಂಬ್‌ಗೆ ಹೋಲಿಸಿ ಅವರು ವಿಶ್ಲೇಷಣೆ ಮಾಡಿದ್ದಾರೆ.
'ಜಪಾನ್‌ನ ಹಿರೋಶಿಮಾ ನಗರದ ಮೇಲೆ ನಡೆದ ಬಾಂಬ್ ದಾಳಿಯಿಂದ ಸಾವಿರಾರು ಜನರು ಸಾವಿಗೀಡಾದರು. ಆದರೆ, ಈಗ ನಡೆಯುತ್ತಿರುವ ಗೂಢಚರ್ಯೆಯಿಂದ ಸ್ವಾತಂತ್ರ್ಯದ ಸಾವು ಸಂಭವಿಸುತ್ತಿದೆ. ಆಧುನಿಕ ತಂತ್ರಜ್ಞಾನ ನಮ್ಮನ್ನು ಗುಲಾಮಗಿರಿಯತ್ತ ಕೊಂಡೊಯ್ಯುತ್ತಿದೆ' ಎಂದು ರಾವುತ್ ಹೇಳಿದ್ದಾರೆ.
'ಪೆಗಾಸಸ್ ಸಾಫ್ಟ್‌ವೇರ್‌ಗೆ ಇಸ್ರೇಲಿ ಕಂಪನಿ ಎನ್‌ಎಸ್‌ಒ ವಾರ್ಷಿಕ ₹60 ಕೋಟಿಯನ್ನು ಲೈಸನ್ಸ್ ಶುಲ್ಕವಾಗಿ ಪಡೆಯುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ಲೈಸನ್ಸ್‌ನಿಂದ 50 ದೂರವಾಣಿಗಳನ್ನು ಹ್ಯಾಕ್ ಮಾಡಬಹುದು. 300 ದೂರವಾಣಿಗಳಿಗೆ ಆರರಿಂದ ಏಳು ಲೈಸನ್ಸ್‌ಗಳು ಅಗತ್ಯ. ಆದ್ದರಿಂದ, ಅಪಾರ ಮೊತ್ತವನ್ನು ಗೂಢಚರ್ಯೆಗಾಗಿ ಖರ್ಚು ಮಾಡಲಾಗಿದೆಯೇ ಮತ್ತು ಈ ಮೊತ್ತವನ್ನು ಪಾವತಿಸಿದ್ದು ಯಾರು' ಎಂದು ಅವರು ಪ್ರಶ್ನಿಸಿದ್ದಾರೆ.
'ಸರ್ಕಾರಗಳಿಗೆ ಮಾತ್ರ ಈ ಸಾಫ್ಟ್‌ವೇರ್ ಮಾರಾಟ ಮಾಡಲಾಗುತ್ತಿದೆ ಎಂದು ಎನ್‌ಎಸ್‌ಒ ತಿಳಿಸಿದೆ. ಹೀಗಾದರೆ, ಭಾರತದಲ್ಲಿನ ಯಾವ ಸರ್ಕಾರ ಈ ಸಾಫ್ಟ್‌ವೇರ್ ಅನ್ನು ಖರೀದಿಸಿತ್ತು. ಭಾರತದಲ್ಲಿನ 300 ಮಂದಿ ಮೇಲೆ ಗೂಢಚರ್ಯೆ ನಡೆಸಲು ₹300 ಕೋಟಿ ಖರ್ಚು ಮಾಡಲಾಗಿದೆಯೇ? ಗೂಢಚರ್ಚೆ ನಡೆಸಲು ಇಷ್ಟೊಂದು ಅಪಾರ ಮೊತ್ತ ಖರ್ಚು ಮಾಡುವ ಸಾಮರ್ಥ್ಯ ನಮ್ಮ ದೇಶಕ್ಕೆ ಇದೆಯೇ?' ಎಂದು ರಾವುತ್ ಪ್ರಶ್ನಿಸಿದ್ದಾರೆ.
'ಮೋದಿ ಸರ್ಕಾರವನ್ನು ಟೀಕಿಸುವ ಪತ್ರಕರ್ತರ ಮೇಲೆ ಗೂಢಚರ್ಯೆ ನಡೆಸಲಾಗಿದೆ. ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಅವರೇ ಗೂಢಚರ್ಯೆವನ್ನು ಸಮರ್ಥಿಸಿಕೊಂಡಿದ್ದಾರೆ. ಜಗತ್ತಿನ 45 ದೇಶಗಳು ಪೆಗಾಸಸ್ ಬಳಸುತ್ತಿವೆ ಎನ್ನುವುದನ್ನು ವಿವರಿಸಿದ್ದಾರೆ' ಎಂದು ಹೇಳಿದ್ದಾರೆ.