ಕಾಸರಗೋಡು: ಅರ್ಹತೆ ಹೊಂದಿರುವ ಎಲ್ಲರಿಗೂ ವಾಸ್ತವ್ಯಕ್ಕೆ ಭೂಮಿ ವಿತರಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿರುವುದಾಗಿ ಬಂದರು ಮತ್ತು ಪ್ರಾಚ್ಯವಸ್ತು ಖಾತೆ ಸಚಿವ ಅಹಮ್ಮದ್ ದೇವರ್‍ಕೋವಿಲ್ ತಿಳಿಸಿದ್ದಾರೆ.
ಅವರು ಮಂಗಳವಾರ ಕಾಸರಗೋಡು ಜಿಲ್ಲಾ ಮಟ್ಟದ ಹಕ್ಕು ಪತ್ರ ವಿತರಣಾ ಮೇಳವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿ, ಜಾಗದ ಹಕ್ಕುಪತ್ರ ಫಲಾನುಭವಿಗಳಿಗೆ ವಿತರಿಸಿದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಸಿ.ಎಚ್ ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸವಾಘತ್ ರಣ್‍ವೀರ್ ಚಂದ್, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ನಗರಸಭಾ ಅಧ್ಯಕ್ಷ ವಿ.ಎಂ ಮುನೀರ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ ಸೈಮಾ, ಚೆಂಗಳ ಗ್ರಾಪಂ ಅಧ್ಯಕ್ಷ ಖಾದರ್ ಬದರಿಯಾ ಮುಂತಾದವರು ಉಪಸ್ಥಿತರಿದ್ದರು.
ದೀರ್ಘ ಕಾಲದಿಂದ ತಮ್ಮವಶದಲ್ಲಿರುವ ಭೂಮಿಯ ದಾಖಲೆಗಾಗಿ ಕಾಯುತ್ತಿದ್ದ 589ಮಂದಿಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆದ ಹಕ್ಕುಪತ್ರ ವಿತರಣಾ ಮೇಳದಲ್ಲಿ ಹಕ್ಕುಪತ್ರ ವಿತರಿಸಲಾಯಿತು. ಕಸರಗೋಡು ತಾಳೂಕಿನಲ್ಲಿ 86, ಮಂಜೇಶ್ವರದಲ್ಲಿ 17, ವೆಳ್ಳರಿಕುಂಡಿನಲ್ಲಿ 47, ಹೊಸದುರ್ಗ ತಾಲೂಕಿನಲ್ಲಿ 52 ಹಾಗೂ ಕಾಸರಗೋಡು ನಗರಸಭೆಯಲ್ಲಿ 11 ಹಕ್ಕುಪತ್ರಗಳನ್ನು ವಿತರಿಸಲಾಯಿತು.


