ಕಾಸರಗೋಡು: ಹಿಂದುಗಳು ಸಂಘಟನೆಯಾದಾಗ ಸಮಾಜವು ಜಾಗೃತಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತೀ ಹಿಂದು ಮನೆಯಿಂದಲೂ ಕನಿಷ್ಠ ಓರ್ವನಾದರೂ ವಿಶ್ವ ಹಿಂದು ಪರಿಷತ್ ನಲ್ಲಿ ತೊಡಗಿಸಿಕೊಳ್ಳಬೇಕು. ಈ ಮೂಲಕ ಸಶಕ್ತ ಹಿಂದು ರಾಷ್ಟ್ರ ಪರಿಪೂರ್ಣವಾಗುತ್ತದೆ ಎಂದು ವಿಶ್ವ ಹಿಂದು ಪರಿಷತ್ ನ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಕಯ್ಯಾರಿನಲ್ಲಿ ಭಾನುವಾರ ಜರಗಿದ ವಿಶ್ವ ಹಿಂದು ಪರಿಷತ್, ಬಜರಂಗ ದಳ, ಮಾತೃ ಶಕ್ತಿ , ದುರ್ಗಾವಾಹಿನಿ ಇವುಗಳ ಪರಂಬಳ ಕಯ್ಯಾರು ಉಪಖಂಡ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಪದಾಧಿಕಾರಿಗಳ ಘೋಷಣೆ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣ ಆರಂಭಗೊಂಡಿದ್ದು , ಕೆಲವೇ ವರ್ಷಗಳಲ್ಲಿ ಸಾಕಾರಗೊಳ್ಳಲಿದೆ. ಶ್ರೀರಾಮನ ಮಂದಿರವು ಭಾರತದ ಆತ್ಮವಾಗಲಿದೆ. ಮಂದಿರ ನಿರ್ಮಾಣ ಸೇವಾ ಚಟುವಟಿಕೆಗಳಲ್ಲಿ ಪ್ರತಿಯೊಬ್ಬ ಹಿಂದುವೂ ಭಾಗಿಯಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ವಿಹಿಂಪ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷೆ ಮೀರಾ ಆಳ್ವ ಬೇಕೂರು ಪ್ರಾಸ್ತಾವಿಕ ಭಾಷಣ ಮಾಡಿ, ಕಾರ್ಯಕರ್ತರು ಸೇವಾ ಮನೋಭಾವವನ್ನು ಬೆಳೆಸಿಕೊಂಡು ಕರ್ತವ್ಯಪ್ರಜ್ಞೆಯಿಂದ ಮುಂದುವರಿಯಬೇಕು. ದೇಶದ ಪರಮ ವೈಭವ ನಮ್ಮ ಗುರಿಯಾಗಿರಬೇಕು ಎಂದರು.
ವಿಹಿಂಪ ಪರಂಬಳ ಕಯ್ಯಾರು ಉಪಖಂಡ ಸಮಿತಿಯ ಅಧ್ಯಕ್ಷ ಗಿರೀಶ್ ಕುಮಾರ್ ಕಯ್ಯಾರು ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಭಟ್ ಉಳುವಾನ, ವಿಹಿಂಪ ಜಿಲ್ಲಾ ಸೇವಾ ಪ್ರಮುಖ್ ಸುರೇಶ್ ಶೆಟ್ಟಿ ಪರಂಕಿಲ, ಬಜರಂಗ ದಳ ಜಿಲ್ಲಾ ಸಂಯೋಜಕ್ ಶೈಲೇಶ್ ಅಂಜರೆ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಸೌಮ್ಯ ಪ್ರಕಾಶ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ವಿಶ್ವ ಹಿಂದು ಪರಿಷತ್, ಬಜರಂಗ ದಳ, ಮಾತೃಶಕ್ತಿ , ದುರ್ಗಾವಾಹಿನಿ ಇವುಗಳ ಪರಂಬಳ ಕಯ್ಯಾರು ಉಪಖಂಡ ಸಮಿತಿಗಳ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು. ಸತೀಶ್ ಕುಮಾರ್ ಕಾಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಯಶಂಕರ ಕಯ್ಯಾರು ವಂದಿಸಿದರು.





