ಬದಿಯಡ್ಕ: ಸಾಮಾಜಿಕ-ಸಾಂಸ್ಕøತಿಕ ಸಂಸ್ಥೆಯಾದ ರಂಗಚಿನ್ನಾರಿ ಕಾಸರಗೋಡು ಇದರ ಹದಿನೈದನೇ ವಾರ್ಷಿಕೋತ್ಸವ ಮತ್ತು ರಂಗಚಿನ್ನಾರಿ ಪ್ರಶಸ್ತಿ ಪ್ರದಾನ ಸಮಾರಂಭ ಶ್ರೀ ಎಡನೀರು ಮಠದ ಪ್ರಾಂಗಣದಲ್ಲಿ ಭಾನುವಾರ ಜರಗಿತು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು, ಕರ್ನಾಟಕ ಲೋಕಸೇವಾ ಆಯೋಗದ ಪೂರ್ವಾಧ್ಯಕ್ಷ ಟಿ.ಶ್ಯಾಮ ಭಟ್, ಸಾಮಾಜಿಕ ಕಾರ್ಯಕರ್ತ ಮಹೇಶ್ ಠಾಕೂರ್, ಇನೋಸಿಸ್ ಎಚ್.ಆರ್ ವಿಕ್ರಂ ಸಾಮಂತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಸಾಧನೆಗಾಗಿ ಯೋಗೀಶ್ ಶರ್ಮ ಬಳ್ಳಪದವು, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಡಾ.ಪಾರ್ವತಿ ಜಿ.ಐತಾಳ್, ಸಾಂಸ್ಕøತಿಕ ಕ್ಷೇತ್ರದ ಸಾಧನೆಗಾಗಿ ಶ್ರದ್ಧಾ ಭಟ್ ನಾಯರ್ಪಳ್ಳ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಶ್ರಾವ್ಯ ಸಿ.ಎಚ್.ಕನಿಯಾಲ ಅವರನ್ನು ರಂಗಚಿನ್ನಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ನುಡಿದು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿ, ಇನ್ನೋರ್ವ ನಿರ್ದೇಶಕ ಸತ್ಯನಾರಾಯಣ ಕೆ. ವಂದಿಸಿದರು. ಕಿಶೋರ್ ಪೆರ್ಲ ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕ ಮನೋಹರ್ ಶೆಟ್ಟಿ, ಜನಾರ್ದನ, ರಾಜ್‍ಮೋಹನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





