HEALTH TIPS

ಜಮ್ಮು ಕಾಶ್ಮೀರದಲ್ಲಿ ಮತ್ತಿಬ್ಬರು ಬಿಹಾರಿ ಕಾರ್ಮಿಕರು ಉಗ್ರರ ಗುಂಡೇಟಿಗೆ ಬಲಿ

                   ಶ್ರೀನಗರ: ಬಿಹಾರ ಮೂಲದ ಮತ್ತಿಬ್ಬರು ಕಾರ್ಮಿಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಮೂಲಕ ಉಗ್ರರ ಗುಂಡೇಟಿಗೆ ಈ ತಿಂಗಳಿನಲ್ಲಿ ಬಲಿಯಾದ ನಾಗರಿಕರ ಸಂಖ್ಯೆಯು ಹನ್ನೊಂದಕ್ಕೆ ಏರಿಕೆ ಆಗಿದೆ.

               ಕುಲ್ಗಾಮ್‌ ಜಿಲ್ಲೆಯ ವನಪೋಹ್‌ ಎಂಬ ಪ್ರದೇಶದಲ್ಲಿ ಕಾರ್ಮಿಕರ ಮೇಲೆ ಈ ಗುಂಡಿನ ದಾಳಿಯು ಭಾನುವಾರ ನಡೆದಿದ್ದು, ಇಬ್ಬರು ಬಿಹಾರಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇನ್ನು ಓರ್ವ ಬಿಹಾರಿ ಕಾರ್ಮಿಕನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

          ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಾಯಕ ನಾಗರಿಕರ ಹತ್ಯೆ ಪ್ರಕರಣಗಳು ಅಧಿಕವಾಗುತ್ತಿದೆ. ಶನಿವಾರ ಇಬ್ಬರನ್ನು ಗುಂಡಿಕ್ಕಿ ಉಗ್ರರು ಹತ್ಯೆ ಮಾಡಿದ್ದಾರೆ. ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಶನಿವಾರ ಬಿಹಾರ ಮೂಲದ ಅರವಿಂದ್‌ ಕುಮಾರ್‌ ಹಾಗೂ ಉತ್ತರ ಪ್ರದೇಶದ ಸಗೀರ್‌ ಅಹ್ಮದ್‌ ಎಂಬಾತನ ಹತ್ಯೆ ನಡೆದಿದೆ.

         ಈ ತಿಂಗಳಿನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 11 ನಾಗರಿಕರುಗಳ ಹತ್ಯೆ ನಡೆದಿದೆ. ಈ ಪೈಕಿ ಐವರು ಬೇರೆ ರಾಜ್ಯದವರು ಆಗಿದ್ದಾರೆ. ಕಾಶ್ಮೀರದಲ್ಲಿರುವ ಬೇರೆ ರಾಜ್ಯದ ಜನರ ಮೇಲೆ ಗುರಿಯಾಗಿಸಿಕೊಂಡು ಈ ಗುಂಡಿನ ದಾಳಿ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

               ಈ ಮೃತ ನಾಗರಿಕರ ಪೈಕಿ ಕಾಶ್ಮೀರ ಪಂಡಿತ ಸಮುದಾಯಕ್ಕೆ ಸೇರಿದ ಮಖಾನ್‌ ಲಾಲ್‌ ಬಿಂದ್ರೋ ಕೂಡಾ ಸೇರಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್‌ನಲ್ಲಿ ಹಲವು ಭಯೋತ್ಪಾದಕ ಸಂಘಟನೆಗಳ ನಾಯಕರೊಂದಿಗೆ ಗೌಪ್ಯ ಸಭೆ ನಡೆಸಿದೆ. ಕಳೆದ ಸೆಪ್ಟೆಂಬರ್ 21ರಂದು ನಡೆದ ಸಭೆ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.

           ಜಮ್ಮು ಮತ್ತು ಕಾಶ್ಮೀರದಲ್ಲಿ ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಲು ಐಎಸ್‌ಐ ಯೋಜನೆಯನ್ನು ಸಿದ್ಧಪಡಿಸಿದೆ. ಕಾಶ್ಮೀರದ ಭಾರತದ ಭಾಗದಲ್ಲಿ ಗರಿಷ್ಠ ಹತ್ಯೆಗಳನ್ನು ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ವರದಿಯಾಗಿದೆ. ಐಎಸ್‌ಐ ಅಧಿಕಾರಿಗಳು ಮತ್ತು ಭಯೋತ್ಪಾದಕ ಗುಂಪುಗಳ ನಾಯಕರ ನಡುವಿನ ಸಭೆಯಲ್ಲಿ ಪೊಲೀಸರು, ಭದ್ರತಾ ಪಡೆಗಳು, ಗುಪ್ತಚರ ಇಲಾಖೆಗಳೊಂದಿಗೆ ಕೆಲಸ ಮಾಡುವ ಕಾಶ್ಮೀರಿಗಳನ್ನು ಕೊಲ್ಲಬೇಕು ಎಂದು ನಿರ್ಧಾರ ಮಾಡಲಾಗಿದೆ. ಕಾಶ್ಮೀರಿಗಳಲ್ಲದ ಜನರು ಮತ್ತು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ಜನರನ್ನು ಗುರಿಯನ್ನಾಗಿಸಿ ದಾಳಿ ಮಾಡಲು ಕೂಡಾ ಸಂಚು ರೂಪಿಸಲಾಗಿದೆ ಎಂದು ವರದಿಯು ಹೇಳಿದೆ.

            ಈ ನಡುವೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆತಂಕದ ವಾತಾವರಣ ಮತ್ತಷ್ಟು ಅಧಿಕವಾಗಿದೆ. ಹಲವಾರು ಕಾಶ್ಮೀರಿ ಪಂಡಿತರು ಜಮ್ಮು ಮತ್ತು ಕಾಶ್ಮೀರವನ್ನು ತೊರೆದು ಬೇರೆ ರಾಜ್ಯಕ್ಕೆ ಹೋಗುತ್ತಿದ್ದಾರೆ. ಇನ್ನು ಪ್ರತ್ಯೇಕತವಾದಿಗಳೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಸುಮಾರು 900 ಮಂದಿಯನ್ನು ಈವರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇನ್ನು ಪೊಲೀಸರ ಪ್ರಕಾರ ಒಂದು ವಾರದಲ್ಲೇ ಸುಮಾರು 13 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ವಿಜಯ್ ಕುಮಾರ್, "ಒಟ್ಟು ಒಂಬತ್ತು ಎನ್‌ಕೌಂಟರ್‌ನಲ್ಲಿ 13 ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ 24 ಗಂಟೆಯಲ್ಲಿ ನಾವು ಶ್ರೀನಗರದಲ್ಲಿ ಐದು ಉಗ್ರರ ಪೈಕಿ ನಾಲ್ವರನ್ನು ಹೊಡೆದುರುಳಿಸಿದ್ದೇವೆ," ಎಂದು ಮಾಹಿತಿ ನೀಡಿದ್ದಾರೆ.

        ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳು, "ಜಮ್ಮು ಕಾಶ್ಮೀರದಲ್ಲಿ ಆಟ ಈಗಷ್ಟೇ ಆರಂಭವಾಗಿದೆ," ಎಂದು ಎಚ್ಚರಿಕೆ ನೀಡಿದೆ. ಆದರೆ ಏತನ್ಮಧ್ಯೆ ಉಗ್ರರಿಗೆ ಖಡಕ್‌ ವಾರ್ನಿಂಗ್‌ ನೀಡಿರುವ ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ, "ನನ್ನನ್ನು ಹತ್ಯೆ ಮಾಡಿದರೂ ಕೂಡ ಕಾಶ್ಮೀರವು ಭಾರತದ ಭಾಗವೇ ಆಗಿರಲಿದೆ," ಎಂದು ಹೇಳಿದ್ದಾರೆ.

          ಅಕ್ಟೋಬರ್ 7 ರಂದು ಇಲ್ಲಿನ ಗುರುದ್ವಾರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಈದ್ಗಾದಲ್ಲಿರುವ ಸರ್ಕಾರಿ ಶಾಲೆಯ ಪ್ರಾಂಶುಪಾಲ ಸುಪಿಂದರ್ ಕೌರ್ ಅವರ ಸಂತಾಪ ಸಭೆಯಲ್ಲಿ ಮಾತನಾಡಿದ ಅಬ್ದುಲ್ಲಾ, ಕಾಶ್ಮೀರದ ಜನರು ಧೈರ್ಯದಿಂದ ಇರಬೇಕು ಮತ್ತು ಒಗ್ಗಟ್ಟಾಗಿ ಕೊಲೆಗಾರರ ವಿರುದ್ಧ ಹೋರಾಡಬೇಕು ಎಂದು ಕರೆ ನೀಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries