ತಿರುವನಂತಪುರಂ: ರಾಷ್ಟ್ರೀಯ ಹೆದ್ದಾರಿ 66 ನ್ನು ಆರು ಪಥಕ್ಕೆ ವಿಸ್ತರಿಸುವ ಪ್ರಕ್ರಿಯೆ ವೇಗವಾಗಿ ಸಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೇರಳದ 20 ರಲ್ಲಿ 16 ಟೆಂಡರ್‍ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಖಚಿತಪಡಿಸಿದೆ ಎಂದು ಸಿಎಂ ಹೇಳಿದರು. ಕಾಸರಗೋಡಿನ ತಲಪ್ಪಾಡಿಯಿಂದ ತಿರುವನಂತಪುರ ಜಿಲ್ಲೆಯ ಕರೋಡ್‍ವರೆಗೆ ಆರು ಪಥದ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಕಾರ್ಯಾರಂಭ ಮಾಡಲಿದೆ.
ಭೂಸ್ವಾಧೀನ ಮತ್ತು ಟೆಂಡರ್ ಪ್ರಕ್ರಿಯೆಯ ನಂತರ ಉತ್ತರ ಕೇರಳದ ಹಲವೆಡೆ ಈಗಿರುವ ರಸ್ತೆಗಳನ್ನು ಅಗಲೀಕರಣಗೊಳಿಸಲು ನಿರ್ಮಾಣ ಕಾರ್ಯವು ವೇಗವಾಗಿ ಸಾಗುತ್ತಿದೆ ಎಂದು ಸಿಎಂ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಕೇರಳದ ಉತ್ತರದಿಂದ ದಕ್ಷಿಣಕ್ಕೆ ಸುಮಾರು 600 ಕಿ.ಮೀ ದೂರದ 10 ಜಿಲ್ಲೆಗಳಲ್ಲಿ ರಸ್ತೆ ಅಭಿವೃದ್ಧಿಯನ್ನು ಕೈಗೊಳ್ಳಲಾಗುತ್ತಿದೆ. ಭೂಸ್ವಾಧೀನ ವಿವಾದದಿಂದ ಹಲವು ವರ್ಷಗಳಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿತ್ತು.
‘‘2013ರ ಭೂಸ್ವಾಧೀನ ಕಾಯಿದೆ ಪ್ರಕಾರ ಭೂಮಾಲೀಕರು ಗರಿಷ್ಠ ದ್ವಿಗುಣ ಪರಿಹಾರಕ್ಕೆ ಅರ್ಹರಾಗಿದ್ದು, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಪರಿಹಾರ ವಿತರಣೆ ಆರು ತಿಂಗಳೊಳಗೆ ಪೂರ್ಣಗೊಳ್ಳಲಿದೆ. ಎನ್ ಎಚ್-66 ಪೂರ್ಣಗೊಳ್ಳುವುದರಿಂದ ರಾಜ್ಯದಲ್ಲಿ ರಸ್ತೆ ಸಂಚಾರ ಸುಗಮವಾಗಲಿದೆ. ಮತ್ತು ಸುರಕ್ಷಿತ" ಎಂದು ಮುಖ್ಯಮಂತ್ರಿ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಭೂಸ್ವಾಧೀನಕ್ಕೆ ಶೇ.75ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ಹಾಗೂ ಶೇ.25ರಷ್ಟು ರಾಜ್ಯ ಸರ್ಕಾರ ಭರಿಸುತ್ತಿದೆ. ರಾಜ್ಯದಲ್ಲಿ ರಸ್ತೆ ಅಗಲೀಕರಣಕ್ಕೆ ಹೆಚ್ಚಿನ ವೆಚ್ಚದ ಭೂಸ್ವಾಧೀನದ ದೃಷ್ಟಿಯಿಂದ ಈ ವಿಧಾನವನ್ನು ತೆಗೆದುಕೊಳ್ಳಲಾಗಿದೆ.
ಪ್ರÀ್ರಸ್ತುತ ರಾಷ್ಟ್ರೀಯ ಹೆದ್ದಾರಿ 66 ರಾಜ್ಯದ ಬಹುತೇಕ ಭಾಗಗಳಲ್ಲಿ ಎರಡು ಪಥಗಳು ಮಾತ್ರ ಇದೆ. ಆದರೆ 2024ರ ವೇಳೆಗೆ ಈ ರಸ್ತೆಯು ಸಂಪೂರ್ಣ ಆರು ಪಥಗಳಾಗುವ ಗುರಿಯನ್ನು ಹೊಂದಿದೆ. ತಿರುವನಂತಪುರ ಜಿಲ್ಲೆಯಲ್ಲಿ ಕರೋಡ್‍ನಿಂದ ಕಜಕೂಟಂವರೆಗೆ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ. ಕೊಡುಂಗಲ್ಲೂರು-ಎಡಪ್ಪಳ್ಳಿ, ಎಡಪ್ಪಲ್ಲಿ-ಪರವೂರು, ಪರವೂರ್-ಕೊಟ್ಟಂಕುಳಂಗರ ಮತ್ತು ಕದಂಪಟ್ಟುಕೋಣಂ-ಕಜಕೂಟಂ ಮಾರ್ಗಗಳನ್ನು ಮಾತ್ರ ಖಚಿತಪಡಿಸಬೇಕಾಗಿದೆ. ಸದ್ಯ ಎಡಪ್ಪಳ್ಳಿಯಿಂದ ತುರವೂರಿಗೆ ನಾಲ್ಕು ಪಥದ ರಸ್ತೆ ಇದೆ. ಇಲ್ಲಿಯೂ ಆರು ಪಥಗಳಿಗೆ ರಸ್ತೆ ವಿಸ್ತರಣೆಯಾಗಲಿದೆ. ಈ ರೀಚ್‍ನಲ್ಲಿಯೂ ಟೆಂಡರ್ ಪ್ರಕ್ರಿಯೆಗಳು ಪ್ರಗತಿಯಲ್ಲಿವೆ. ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಈಗಾಗಲೇ ನಿರ್ಮಾಣ ಕಾರ್ಯ ಆರಂಭವಾಗಿದೆ.
ಮಹಾರಾಷ್ಟ್ರದ ಪನವೇಲ್ ನಿಂದ ತಮಿಳುನಾಡಿನ ಕನ್ಯಾಕುಮಾರಿವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಉದ್ದ 1622 ಕಿ.ಮೀ. ಕೇರಳದಲ್ಲಿ ಉತ್ತರ-ದಕ್ಷಿಣ ಸಾರಿಗೆಯನ್ನು ಸುಗಮಗೊಳಿಸುವುದರ ಜೊತೆಗೆ, ಹೊಸ ಮಾರ್ಗದ ಆಗಮನದಿಂದ ಕೇರಳದಿಂದ ಮಂಗಳೂರು, ಗೋವಾ ಮತ್ತು ಮುಂಬೈಗೆ ಅಂತರರಾಜ್ಯ ಪ್ರಯಾಣವೂ ವೇಗಗೊಳ್ಳುತ್ತದೆ.

