ಕಾಸರಗೋಡು: ಉದ್ಯೋಗ ಕೇಂದ್ರಗಳಲ್ಲಿ ಸಿಬ್ಬಂದಿಯಾಗಿರುವ ಮಹಿಳೆಯರ ದೂರು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಲ್ಲೂ, ಸಾರ್ವಜನಿಕ ಸಂಸ್ಥೆಗಳಲ್ಲೂ ಇಂಟರ್ನಲ್ ದೂರು ಪರಿಹಾರ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಆದೇಶ ನೀಡಿದರು.
ಕಚೇರಿಯ ಉನ್ನತ ಹುದ್ದೆಯಲ್ಲಿರುವ ಮಹಿಳೆ ಸಮಿತಿಯ ಅಧ್ಯಕ್ಷೆ ಆಗಿರಬೇಕು. ಸಮಾಜಿಕ ಚಟುವಟಿಕೆಗಳಲ್ಲೂ, ಕಾನೂನು ಬಗ್ಗೆ ಪರಿಣತಿ ಹೊಂದಿರುವ ಇಬ್ಬರು ಮಹಿಳೆಯರು, ಎನ್.ಜಿ.ಒ. ಪ್ರತಿನಿಧಿಯಾಗಿರುವ 4 ಮಂದಿಯ ಸಮಿತಿ ರಚಿಸಬೇಕು. ಬಹುತೇಕ ಕಚೇರಿಗಳಲ್ಲಿ ಈಗಾಗಲೇ ಇಂಥಾ ಸಮಿತಿಗಳು ಚಟುವಟಿಕೆಯಲ್ಲಿವೆ. ಇನ್ನೂ ಆರಂಭಿಸದೇ ಇರುವ ಕಚೇರಿಗಳಲ್ಲಿ ಶೀಘ್ರದಲ್ಲಿ ಸಮಿತಿಗೆ ರೂಪು ನೀಡುವಂತೆ ಆದೇಶಿಸಲಾಗಿದೆ. ಕೇರಳ ಮಹಿಳಾ ಆಯೋಗದ ಆದೇಶ ಪ್ರಕಾರ ಈ ಸಮಿತಿಗಳ ರಚನೆಗೆ ಜಿಲ್ಲಾಧಿಕಾರಿಗೆ ಆದೇಶ ಲಭಿಸಿದೆ. ಉದ್ಯೋಗ ಕೇಂದ್ರಗಳಲ್ಲಿ ಮಹಿಳೆಯರ ಮೇಲೆ ದಬ್ಬಾಳಿಕೆ, ಪೀಡನೆ ಪರಿಹರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

