ನವದೆಹಲಿ: ''ತಮಗೆ ಎರಡನೇ ಬಾರಿ ಜೀವ ಬೆದರಿಕೆ ಕರೆ ಬಂದಿದ್ದು, ಸೂಕ್ತ ಭದ್ರತೆ ಒದಗಿಸಿ,'' ಎಂದು ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇದಾದ ಬಳಿಕ ದೆಹಲಿ ಸಂಸದ ಗಂಭೀರ್ ಮನೆಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
'ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇಮೇಲ್ ಬರುತ್ತಿವೆ. ಈ ವಿಷಯ ಸಂಬಂಧ ಎಫ್ಐಆರ್ ದಾಖಲಿಸಿ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ' ಎಂದು ಅವರು ಪೊಲೀಸರಿಗೆ ಮನವಿ ಮಾಡಿದ್ದಾರೆ. 2018ರಲ್ಲೂ ಗಂಭೀರ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿತ್ತು. ಅಂತಾರಾಷ್ಟ್ರೀಯ ದೂರವಾಣಿ ಸಂಖ್ಯೆಯೊಂದರಿಂದ ಜೀವ ಬೆದರಿಕೆ ಕರೆ ಮಾಡಲಾಗಿತ್ತು.
ಈ ಬಾರಿ ಎರಡು ಬಾರಿ ಐಎಸ್ಐಎಸ್ ಕಾಶ್ಮೀರ್ ಎಂಬ ಹೆಸರಿನಿಂದ ಬೆದರಿಕೆ ಇಮೇಲ್ ಬಂದಿದೆ. ''ನಾವು ನಿನ್ನನ್ನು ಕೊಲ್ಲಲು ಬಯಸಿದ್ದೇವೆ, ನಿನ್ನೆ ಬಚಾವಾಗಿದ್ದೀಯ.'' ಎಂದು ಇಮೇಲ್ ನಲ್ಲಿ ಬರೆಯಲಾಗಿದೆ. ವಿಡಿಯೋ ಫುಟೇಜ್ ಕೂಡಾ ಲಗತ್ತಿಸಲಾಗಿದೆ. ಗಂಭೀರ್ ಮನೆ ಎದುರಿಗೆ ತೆಗೆಯಲಾದ ವಿಡಿಯೋ ಫುಟೇಜ್ ಕೂಡಾ ಅಟ್ಯಾಚ್ ಆಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಮೊದಲ ಬಾರಿಗೆ ಜೀವ ಬೆದರಿಕೆ ಇಮೇಲ್ ಬರುತ್ತಿದ್ದಂತೆ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಕೇಂದ್ರ ವಿಭಾಗ) ಅವರಿಗೆ ಗಂಭೀರ್ ದೂರು ನೀಡಿದ್ದರು. ಮಂಗಳವಾರ ರಾರಿ 9.32ರ ವೇಳೆಗೆ ಗಂಭೀರ್ ಅವರ ಅಧಿಕೃತ ಇಮೇಲ್ ಐಡಿಗೆ ಬೆದರಿಕೆ ಪತ್ರ ಬಂದಿದ್ದು, "ISIS Kashmir" ಎಂದು ಸಹಿ ಹಾಕಲಾಗಿದೆ.
ಪತ್ರದಲ್ಲಿ ಏನಿದೆ?: ನಾವು ನಿನ್ನನ್ನು ನಿನ್ನ ಕುಟುಂಬವನ್ನು ಕೊಲ್ಲುತ್ತೇವೆ. ನಿನ್ನ ಮೇಲೆ ನಿರಂತರವಾಗಿ ನಿಗಾ ಇಟ್ಟಿದ್ದೇವೆ ಎಂದು ಬರೆಯಲಾಗಿದೆ. ಪತ್ರ "ISIS Kashmir" ಎಂಬುವವರಿಂದ ಬಂದಿದೆಯಾದರೂ ಪತ್ರ ಕಳಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಗುಪ್ತಚರ ಇಲಾಖೆ ವಿಶೇಷ ವಿಭಾಗದ ಸಿಬ್ಬಂದಿಗಳು ಪತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಗೂಗಲ್ ಸಂಸ್ಥೆಗೆ ಮನವಿ ಸಲ್ಲಿಸಿದ್ದಾರೆ. ಇಮೇಲ್ ಕಳಿಸಿದವರು ಯಾರು? ಐಪಿ ಲೊಕೇಷನ್ ಎಲ್ಲಿದೆ? ಯಾವ ಸಾಧನದಿಂದ ಕಳಿಸಲಾಗಿದೆ? ಎಂಬುದರ ಬಗ್ಗೆ ಮಾಹಿತಿ ಕೋರಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದರು.
ಗಂಭೀರ್ ಅವರ ಖಾಸಗಿ ಕಾರ್ಯದರ್ಶಿ ಗೌರವ್ ಅರೋರಾ ಅವರು ಎರಡನೇ ಬಾರಿ ಇಮೇಲ್ ಬಂದ ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ. ರಾಜೇಂದ್ರ ನಗರ ಠಾಣೆಯಲ್ಲಿ ಬುಧವಾರದಂದು ದೂರು ದಾಖಲಿಸಿದ್ದಾರೆ.
ಅನಾಮಿಕ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ರಾಜೇಂದ್ರ ನಗರದಲ್ಲಿರುವ ಗಂಭೀರ್ ಮನೆಗೆ ಭದ್ರತೆ ಒದಗಿಸಿದ್ದಾರೆ. ಇಮೇಲ್ ಕಳಿಸಿದವರ ಪತ್ತೆಗಾಗಿ ಸೈಬರ್ ಸೆಲ್ ನೆರವು ಪಡೆದುಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಎಫ್ಐಆರ್ ದಾಖಲಿಸಿಲ್ಲ, ತನಿಖೆ ಜಾರಿಯಲ್ಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.



