ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ನ. 18ರಿಂದ ಸ್ಪಟ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಶಬರಿಮಲೆಯ ಹತ್ತು ಕೇಂದ್ರಗಳಲ್ಲಿ ವ್ಯವಸ್ಥೆ ಏರ್ಪಡಿಸಿರುವುದಾಗಿ ಸರ್ಕಾರ ಹೈಕೋರ್ಟಿಗೆ ತಿಳಿಸಿದೆ. ಮೊದಲೇ ಬುಕ್ ನಡೆಸದೆ, ದರ್ಶನಕ್ಕಾಗಿ ತೆರಳುವ ಭಕ್ತಾದಿಗಳಿಗೆ ಇದು ಸಹಕಾರಿಯಾಗಲಿದೆ. ಇದು ವರ್ಚುವಲ್ ಕ್ಯೂವಿಗೆ ಹೊರತಾಗಿರಲಿದೆ. ಸ್ಪಾಟ್ ಬುಕ್ಕಿಂಗ್‍ಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ದೇವಸ್ವಂ ಬೋರ್ಡ್ ಮತ್ತು ಸರ್ಕಾರ ಸಮಾಲೋಚಿಸಿ ತೀರ್ಮಾನ ಕೈಗೊಳ್ಳುವಂತೆ ಹಾಗೂ ಎಲ್ಲೆಲ್ಲಿ ವ್ಯವಸ್ಥೆ ಲಭ್ಯವಾಗಲಿದೆ ಎಂಬುದನ್ನೂ ಪ್ರಕಟಪಡಿಸುವಂತೆ ಹೈಕೋರ್ಟು ಸೂಚಿಸಿತ್ತು. ಸ್ಪಾಟ್ ಬುಕ್ಕಿಂಗ್ ನಡೆಸಲು ಆಧಾರ್‍ಕಾರ್ಡು, ಚುನಾವಣಾ ಗುರುತಿನ ಚೀಟಿ ಅಲ್ಲದೆ ಪಾಸ್‍ಪೋರ್ಟನ್ನೂ ಬಳಸಬಹುದಾಗಿದೆ.
ಭಕ್ತಾದಿಗಳಿಗೆ ಸವಲತ್ತು-ಸಚಿವ ಭರವಸೆ:
ಬಿರುಸಿನ ಮಳೆ ಕಡಿಮೆಯಾಗುತ್ತಿದ್ದು, ಶಬರಿಮಲೆ ಯಾತ್ರೆಗೆ ಭಕ್ತಾದಿಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ಹೆಚ್ಚಿನ ವ್ರತಧಾರಿಗಳು ಸನ್ನಿಧಾನ ಬಂದು ಸೇರಲಿರುವ ಹಿನ್ನೆಲೆಯಲ್ಲಿ ಅಗತ್ಯ ಸವಲತ್ತು ಒದಗಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ದೇವಸ್ವಂ ಮತ್ತು ಮುಜರಾಯಿ ಖಾತೆ ಸಚಿವ ರಾಧಾಕೃಷ್ಣನ್ ತಿಳಿಸಿದ್ದಾರೆ.
ಮಂಡಲ ಪೂಜಾ ಮಹೋತ್ಸವ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 13ಲಕ್ಷ ಮಂದಿ ಭಕ್ತಾದಿಗಳು ವರ್ಚುವಲ್ ಕ್ಯೂ ಮೂಲಕ ದರ್ಶನ ಪಡೆಯಲು ಬುಕ್ಕಿಂಗ್ ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

