ಕಾಸರಗೋಡು: ಕೇರಳ ಲೋಕಸೇವಾ ಆಯೋಗ ಸೋಮವಾರ ನಡೆಸಿದ ಎಚ್.ಎಸ್.ಎ ಪರೀಕ್ಷೆಯಲ್ಲಿ ಎರಡು ವರ್ಷದ ಹಿಂದೆ ಕನ್ನಡ ಫೇಸ್‍ಬುಕ್‍ನಲ್ಲಿ ಬಂದ ಪ್ರಶ್ನೆಗಳು ನುಸುಳಿಕೊಂಡಿರುವುದಾಗಿ ಪರೀಕ್ಷಾರ್ಥಿಗಳು ಆರೋಪಿಸಿದ್ದಾರೆ.
ಕನ್ನಡ ಭಾಷಾ ವ್ಯಾಕರಣಕ್ಕೆ ಸಂಬಂಧಿಸಿದ ಕೆಲವೊಂದು ಪ್ರಶ್ನೆಗಳು ಹಾಗೂ ಇದರ ಉತ್ತರ ಎರಡು ವರ್ಷಗಳ ಹಿಂದೆ ಫೇಸ್‍ಬುಕ್‍ನಲ್ಲಿ ಪ್ರಕಟಗೊಂಡಿದ್ದು, ಇದನ್ನು ಯಥಾಪ್ರಕಾರ ಪಿಎಸ್‍ಸಿ ಪ್ರಶ್ನೆ ಪತ್ರಿಕೆಯಲ್ಲಿ ಪ್ರಕಟಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಕೆಲವರು ತಿಳಿಸಿದ್ದಾರೆ. ಪಿಎಸ್‍ಸಿಗೆ ಪ್ರಶ್ನೆ ಪತ್ರಿಕೆ ತಯಾರಿಸಲು ಪ್ರತ್ಯೇಕ ಪ್ಯಾನಲ್ ಇದ್ದು, ಈ ಭಾಷಾ ವಿದ್ವಾಂಸರ ನಿರ್ಲಕ್ಷ್ಯದಿಂದ ಇಂತಹ ಲೋಪ ಉಂಟಾಗಿರಬಹುದು ಎಂದು ಅಭಿಪ್ರಾಯಪಡಲಾಗಿದೆ. ಪಿಎಸ್‍ಸಿ ಪರೀಕ್ಷೆಗಾಗಿ ನಿರಂತರ ಶ್ರಮಿಸಿ, ಪರೀಕ್ಷೆಗೆ ಹಾಜರಾಗುವವರಿಗೆ ಇಂತಹ ಪ್ರಶ್ನಾವಳಿಗಳಿಂದ ಮನೋಸ್ಥೈರ್ಯ ಕುಸಿಯಲು ಕಾರಣವಾಗುತ್ತಿರುವುದಾಗಿ ದೂರಲಾಗಿದೆ.
ಈ ಬಗ್ಗೆ ದೂರುಗಳನ್ನು ಪಿಎಸ್‍ಸಿ ಬೋರ್ಡ್‍ಗೆ ಸಲ್ಲಿಸಿದಲ್ಲಿ ತಜ್ಞ ಸಮಿತಿ ದಾಖಲೆ ಪರಿಶೀಲಿಸಿ ವಿವಾದಾಸ್ಪದ ಪ್ರಶ್ನೆಗಳನ್ನು ಕೈಬಿಟ್ಟು ಉಳಿದ ಪ್ರಶ್ನೆಗಳಿಗೆ ಅಂಕ ನೀಡುವ ವ್ಯವಸ್ಥೆ ಪಿಎಸ್‍ಸಿಯಲ್ಲಿರುವುದಾಗಿ ಪಿಎಸ್‍ಸಿ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

