HEALTH TIPS

ಹೈದರ್‌ಪೋರಾ ಎನ್‌ಕೌಂಟರ್: ಕಾಶ್ಮೀರ ಕಣಿವೆ ಸಂಪೂರ್ಣ ಸ್ತಬ್ಧ

             ಶ್ರೀನಗರಇಲ್ಲಿನ ಹೈದರ್‌ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳಿಗೆ ಬಲಿಯಾದ ಮೂವರು ನಾಗರಿಕರ ಹತ್ಯೆ ಖಂಡಿಸಿ ಹುರಿಯತ್‌ ಕಾನ್ಫರೆನ್ಸ್‌ ಕರೆ ನೀಡಿದ್ದ ಕಾಶ್ಮೀರ ಬಂದ್‌ಗೆ ಶುಕ್ರವಾರ ಕಣಿವೆಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನ ಸಂಪೂರ್ಣ ಸ್ತಬ್ಧವಾಗಿತ್ತು.

             ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಸಂಪೂರ್ಣ ಬಂದ್‌ ಆಗಿದ್ದವು. ರಜೆ ದಿನವಾದ್ದರಿಂದ ಸರ್ಕಾರಿ ಕಚೇರಿಗಳು ತೆರೆದಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹಾಗೂ ಅರೆ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ಗಸ್ತನ್ನು ಹೆಚ್ಚಿಸಲಾಗಿತ್ತು.

            2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಕಾಶ್ಮೀರ ಪ್ರತ್ಯೇಕತಾವಾದಿಗಳು ಕರೆ ನೀಡಿದ ಮೊದಲ ಬಂದ್‌ ಇದಾಗಿದೆ.

               ಹತ್ಯೆಯಾದ ಮೂವರು ನಾಗರಿಕರ ಶವಗಳನ್ನು ಅಂತ್ಯಸಂಸ್ಕಾರ ನಡೆಸಲು ಸಂತ್ರಸ್ತ ಕುಟುಂಬಗಳಿಗೆ ಅವಕಾಶ ನಿರಾಕರಿಸಿದ ಪೊಲೀಸ್‌ ಹಾಗೂ ಭದ್ರತಾ ಪಡೆಗಳ ನಡೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದಾದ್ಯಂತ ವಿವಿಧ ನಾಯಕರು ಹಾಗೂ ಸಂಘಟನೆಗಳು ಭಾರಿ ಪ್ರತಿಭಟನೆ ನಡೆಸಿದ್ದವು.

               ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಗುರುವಾರ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮ್ಯಾಜಿಸ್ಟ್ರೇಟ್‌ ತನಿಖೆಗೆ ಒಪ್ಪಿಸಿದೆ. ಅಲ್ಲದೇ ಹತ್ಯೆಯಾದ ಉದ್ಯಮಿ, ವೈದ್ಯರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿ ಮರು ಅಂತ್ಯಸಂಸ್ಕಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಕುಪ್ವಾರ ಜಿಲ್ಲೆಯ ಹಂದ್ವಾರ ಎಂಬಲ್ಲಿ ಇಬ್ಬರು ನಾಗರಿಕರ ಶವಗಳನ್ನು ಪೊಲೀಸರೇ ಅಂತ್ಯಸಂಸ್ಕಾರ ನಡೆಸಿದ್ದರು.

                                   ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಒತ್ತಾಯ:

             ಶ್ರೀನಗರದ ಹೈದರ್‌ಪೋರಾದಲ್ಲಿ ನಡೆದ ನಾಗರಿಕರ ಹತ್ಯೆ ಪ್ರಕರಣ ಕುರಿತು ರಾಷ್ಟ್ರಪತಿಯವರು ಮಧ್ಯಪ್ರವೇಶಿಸಿ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಸರ್ವ ಪಕ್ಷಗಳ ಜನಪ್ರತಿನಿಧಿಗಳ ಒಕ್ಕೂಟ (ಪಿಎಜಿಡಿ) ಒತ್ತಾಯಿಸಿದೆ.

                ಈ ಕುರಿತು ಗುರುವಾರ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ ಬರೆದಿರುವ ಪಿಎಜಿಡಿ ಅಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, 'ಮೂವರು ನಾಗರಿಕರ ಹತ್ಯೆ ನಡೆದಿರುವುದು ದುರದುಷ್ಟಕರ. ಇಂತಹ ಘಟನೆಗಳು ಇಲ್ಲಿನ ಜನರ ಹಾಗೂ ಭಾರತ ಸರ್ಕಾರದ ನಡುವೆ ಕಂದಕವನ್ನುಂಟು ಮಾಡುತ್ತದೆ. ಸತ್ತವರನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಲು ಭಾರತದ ಸಂವಿಧಾನ ಹಾಗೂ ಅಂತರರಾಷ್ಟ್ರೀಯ ಕಾನೂನು ಅವಕಾಶ ಕಲ್ಪಿಸಿದೆ. ಆದರೆ ಅಂತ್ಯಸಂಸ್ಕಾರಕ್ಕೆ ನಿರಾಕರಿಸುತ್ತಿರುವ ಭದ್ರತಾ ಪಡೆಗಳ ನಡೆ ಇಲ್ಲಿನ ಜನರ ಹಕ್ಕನ್ನು ಕಸಿದುಕೊಳ್ಳುತ್ತಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

               ಹೈದರ್‌ಪೋರಾದ ಎನ್‌ಕೌಂಟರ್‌ ಕುರಿತು ನಿಷ್ಪಕ್ಷಪಾತ ಹಾಗೂ ಕಾಲಮಿತಿಯೊಳಗೆ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ರಾಷ್ಟ್ರಪತಿಯವರನ್ನು ಒತ್ತಾಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿರುವ ಇಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಏಜೆಂಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಕಾನೂನಿನ ಆಳ್ವಿಕೆಯನ್ನು ಖಚಿತಪಡಿಸುವಲ್ಲಿ ನಿಮ್ಮ ಜವಾಬ್ದಾರಿ ಗುರುತರವಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

              ನ.15ರಂದು ಶ್ರೀನಗರದ ಹೊರವಲಯದಲ್ಲಿ ಹೈದರ್‌ಪೋರಾದಲ್ಲಿ ಭದ್ರತಾ ಪಡೆಗಳು ನಡೆಸಿದ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ನಾಗರಿಕರು, ಒಬ್ಬ ವಿದೇಶಿ ಉಗ್ರ ಹತರಾಗಿದ್ದರು. ಹತ್ಯೆಯಾದ ಮೂವರು ನಾಗರಿಕರೂ ಉಗ್ರರ ಸಹಚರರು ಎಂದು ಪೊಲೀಸರು ಹೇಳಿದ್ದರು. ನಂತರ ಹತ್ಯೆಯಾದವರು ಉಗ್ರರ ಸಹಚರರಲ್ಲ ಎಂಬುದು ಬೆಳಕಿಗೆ ಬಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries