ಕಾಸರಗೋಡು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಡಿ. 21ರಂದು ಕಾಸರಗೋಡಿಗೆ ಭೇಟಿ ನೀಡುವರು. ಅವರು ಕೇರಳ ಕೇಂದ್ರ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ಮ 3.30ಕ್ಕೆ ಪೆರಿಯ ಕೇಂದ್ರೀಯ ವಿಶ್ವ ವಿದ್ಯಾಲಯ ಹೆಲಿಪ್ಯಾಡಿನಲ್ಲಿ ಬಂದಿಳಿಯುವ ಅವರು 4.30ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಈ ಸಂದರ್ಭ 2015-2020ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿಪ್ರದಾನ ಸಮಾರಂಭ ನಡೆಯುವುದು. ಪೆರಿಯ ಕ್ಯಾಂಪಸ್ ಎದುರು ಸಿದ್ಧಪಡಿಸಲಾದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ಸಿದ್ಧತಾ ಕಾರ್ಯ ಬಿರುಸಿನಿಂದ ನಡೆಯುತ್ತಿರುವುದಾಗಿ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ತಿಳಿಸಿದ್ದಾರೆ.

