ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಮಧ್ಯೆ ಸಚಿವಾಲಯ ಇಂದು ನೀಡಿರುವ ಅಂಕಿಅಂಶದಂತೆ ದೇಶದಲ್ಲಿ ಇದುವರೆಗೆ 236 ಓಮಿಕ್ರಾನ್ ಕೇಸುಗಳು ವರದಿಯಾಗಿವೆ. ನಿನ್ನೆಯವರೆಗೆ 213 ಪ್ರಕರಣಗಳಿದ್ದವು. ಒಂದೇ ದಿನದಲ್ಲಿ 23 ಕೇಸುಗಳು ಹೆಚ್ಚಾಗಿವೆ.
ಓಮಿಕ್ರಾನ್ ನಿಂದ ಬಾಧಿತರಾಗುವ ಜನಸಂಖ್ಯೆಯ ಬಗ್ಗೆ ಡೇಟಾವನ್ನು ಸಂಗ್ರಹಿಸುವುದಕ್ಕಾಗಿ ಕೋವಿಡ್-19 ವಾರ್ ರೂಮ್ ಗಳನ್ನು ಪುನಾರಂಭಗೊಳಿಸಲು ರಾಜ್ಯಗಳಿಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.ಭಾರತ ಸೇರಿದಂತೆ ಜಗತ್ತಿನಾದ್ಯಂತ ಓಮಿಕ್ರಾನ್ ಸೋಂಕಿನ ಭೀತಿ ಹೆಚ್ಚಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ 6.960 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ದೇಶದಲ್ಲಿ ಇದುವರೆಗೆ ಒಟ್ಟಾರೆಯಾಗಿ 3 ಕೋಟಿಯ 42 ಲಕ್ಷದ 08 ಸಾವಿರದ 926 ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ಹೊಂದಿದವರ ಪ್ರಮಾಣ ಶೇಕಡಾ 98.40ರಷ್ಟಾಗಿದ್ದು ಕಳೆದ ವರ್ಷ ಮಾರ್ಚ್ ನಿಂದ ಅತಿ ಕಡಿಮೆಯಾಗಿದೆ.
ದೇಶದಲ್ಲಿ ಕೋವಿಡ್ ವೈರಸ್ ನ ವಿರುದ್ಧ ಹೋರಾಡಲು ಲಸಿಕಾ ಅಭಿಯಾನ ಆರಂಭವಾದ ನಂತರ ಇಲ್ಲಿಯವರೆಗೆ 1,39,69,76,774 ಡೋಸ್ ಲಸಿಕೆ ವಿತರಣೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 57 ಲಕ್ಷ ಡೋಸ್ ಗಳನ್ನು ನೀಡಲಾಗಿದೆ. ಇದುವರೆಗೆ ದೇಶದಲ್ಲಿ 66 ಕೋಟಿಯ 86 ಲಕ್ಷ ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.




