ಕಾಸರಗೋಡು: ಜಿಲ್ಲಾ ಕೆಂಪುಕಲ್ಲು-ಕರ್ಗಲ್ಲು ನಿರ್ಮಾಣ ಕಾರ್ಮಿಕರ ಸಂಘ(ಬಿಎಂಎಸ್)ವತಿಯಿಂದ ವಿವಿಧ ಬೇಡಿಕೆ ಮುಂದಿರಿಸಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ಬಿಎಂಎಸ್ ರಾಜ್ಯ ಸಮಿತಿ ಉಪಾಧ್ಯಕ್ಷ ಎಂ.ಪಿ ರಾಜೀವನ್ ಧರಣಿ ಉದ್ಘಾಟಿಸಿ ಮಾತನಾಡಿ, ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸ ನಡೆಸುತ್ತಿರುವ ಕಾರ್ಮಿಕರು ನಿರಂತರ ಹೋರಾಟದ ಮೂಲಕ ಗಳಿಸಿದ ಸವಲತ್ತು ಮತ್ತು ಹಕ್ಕುಗಳನ್ನು ಕಸಿದುಕೊಳ್ಳುವ ಕೇರಳ ಸರ್ಕಾರ ತನ್ನ ಕಾರ್ಮಿಕ ವಿರೋಧಿ ಧೋರಣೆ ಕೈಬಿಡದಿದ್ದಲ್ಲಿ, ಬಿಎಂಎಸ್ ಪ್ರಬಲ ಹೋರಾಟಕ್ಕೆ ಮುಂದಾಗಲಿರುವುದಾಗಿ ತಿಳಿಸಿದರು. ಕಳೆದ ನಾಲ್ಕು ತಿಂಗಳಿಂದ ಅರ್ಹರಿಗೆ ಪಿಂಚಣಿ ಲಭಿಸುತ್ತಿಲ್ಲ. ಕ್ಷೇಮನಿಧಿ ಬೋರ್ಡ್‍ನಿಂದ ಲಭಿಸಬೇಕಾದ ಸವಲತ್ತುಗಳೂ ಕಾರ್ಮಿಕರಿಗೆ ಲಭ್ಯವಾಗುತ್ತಿಲ್ಲ. ಕೇರಳದಲ್ಲಿ ಅದಲು, ಬದಲಾಗಿ ಆಡಳಿತ ನಡೆಸುತ್ತಿರುವ ಎಡ-ಐಕ್ಯರಂಗಗಳ ಕಾರ್ಮಿಕ ವಿರೋಧಿ ಧೋರಣೆಯಿಂದ ಕಾಂರ್ಇಕರು ಸಂಕಷ್ಟ ಎದುರಿಸುವಂತಾಘಿದೆ ಎಂದು ತಿಳಿಸಿದರು.
ಯೂನಿಯನ್ ಜಿಲ್ಲಾಧ್ಯಕ್ಷ ಎನ್. ಐತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾಧ್ಯಕ್ಷ ಪಿ.ವಿ ಬಾಲಕೃಷ್ಣನ್, ಪದಾಧಿಕಾರಿಗಳಾದ ಗೋವಿಂದನ್, ಕೆ.ಎ ಶ್ರೀನಿವಾಸನ್, ಎಂ.ಕೆ ರಾಘವನ್, ಪಿ.ದಿನೇಶ್, ಹರೀಶ್ ಕುದ್ರೆಪ್ಪಾಡಿ, ಕೆ.ಪಿ ಬಾಬು, ಅನಿಲ್ ಬಿ.ನಾಯರ್ ಉಪಸ್ಥಿತರಿದ್ದರು. ಧರಣಿಗೆ ಮೊದಲು ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಹಿಳೆಯರ ಸಹಿತ ನೂರಾರು ಮಂದಿ ಕಾರ್ಮಿಕರು ಪಾಲ್ಗೊಂಡಿದ್ದರು.

