ಲಂಡನ್ : ಓಮಿಕ್ರಾನ್‌ನಿಂದಾಗಿ ಯಾವುದೇ ಸಾವು ಪ್ರಕರಣಗಳು ಈವರೆಗೂ ವರದಿ ಆಗಿರಲಿಲ್ಲ. ಈಗ ಯುಕೆಯಲ್ಲಿ ವಿಶ್ವದ ಮೊದಲ ಓಮಿಕ್ರಾನ್ ಸಾವು ಪ್ರಕರಣವು ವರದಿ ಆಗಿದೆ. ಈ ಬಗ್ಗೆ ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಖಚಿತ ಪಡಿಸಿದ್ದಾರೆ.
ಕೊರೊನಾ ವೈರಸ್‌ನ ರೂಪಾಂತರ ಓಮಿಕ್ರಾನ್‌ನಿಂದಾಗಿ ಯುಕೆಯಲ್ಲಿ ಕನಿಷ್ಠ ಒಂದು ಮಂದಿಯಾದರೂ ಸಾವನ್ನಪ್ಪಿದ್ದಾರೆ ಎಂದು ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. "ಯುಕೆಯಲ್ಲಿ ಹೊಸ ರೂಪಾಂತರ ಓಮಿಕ್ರಾನ್‌ನಿಂದಾಗಿ ಜನರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣವು ಕೂಡಾ ಅಧಿಕವಾಗುತ್ತಿದೆ. ಇದರಿಂದಾಗಿ ಜನರು ಮಾಡಬೇಕಾದ ಉತ್ತಮ ಕಾರ್ಯ ಕೇಲವ ಒಂದು ಉಳಿದಿದೆ, ಜನರು ಶೀಘ್ರವೇ ಬೂಸ್ಟರ್ ಲಸಿಕೆಯನ್ನು ಪಡೆದುಕೊಳ್ಳಿ," ಎಂದು ಯುಕೆ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಮನವಿ ಮಾಡಿದ್ದಾರೆ.ಲಂಡನ್‌ನಲ್ಲಿ ಕೋವಿಡ್ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಅಲ್ಲಿನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್, "ಓಮಿಕ್ರಾನ್ ಸಣ್ಣ ರೂಪಾಂತರ, ಅದು ಹೆಚ್ಚು ಪರಿಣಾಮ ಉಂಟು ಮಾಡುವುದಿಲ್ಲ ಎಂಬ ಭಾವನೆಯನ್ನು ಜನರು ತಮ್ಮ ತಲೆಯಿಂದ ತೆಗೆಯಬೇಕು," ಎಂದು ತಿಳಿಸಿದ್ದಾರೆ.
ಇನ್ನು ಪಶ್ಚಿಮ ಲಂಡನ್‌ನ ಪ್ಯಾಡಿಂಗ್‌ಟನ್ ಬಳಿ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಬೋರಿಸ್ ಜಾನ್ಸನ್, "ಒಂದು ದುಃಖಕರ ವಿಚಾರವಿದೆ. ಓಮಿಕ್ರಾನ್ ಸೋಂಕಿನಿಂದ ಜನರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ದುಃಖಕರವೆಂದರೆ ಕನಿಷ್ಠ ಒಬ್ಬ ರೋಗಿಯಾದರೂ ಓಮಿಕ್ರಾನ್‌ನಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ," ಎಂದು ಹೇಳಿದರು. ಇಂಗ್ಲೆಂಡಿನ ಎಲ್ಲಾ ವಯಸ್ಕರಿಗೆ ತಿಂಗಳಾಂತ್ಯದೊಳಗೆ ಬೂಸ್ಟರ್ ಅನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ, ಎಂದು ಹೇಳಿದ ಯುಕೆ ಪ್ರಧಾನಿ, "ನಾವು ಸಾಮಾನ್ಯವಾಗಿ ಈಗ ಓಮಿಕ್ರಾನ್ ರೂಪಾಂತರವು ಬೇರೆ ರೂಪಾಂತರಕ್ಕಿಂತ ಅತೀ ಕಡಿಮೆ ಪ್ರಭಾವ ಬೀರುತ್ತದೆ ಎಂದು ಭಾವನೆಯನ್ನು ಹೊಂದಿದ್ದೇವೆ. ಆದರೆ ನಾವು ಆ ಭಾವನೆಯನ್ನು ತೆಗೆಯಬೇಕು. ನಾವು ಈಗ ಲಸಿಕೆ ನೀಡಿಕೆಯನ್ನು ಹೆಚ್ಚಿಸಬೇಕಾಗಿದೆ," ಎಂದು ತಿಳಿಸಿದರು.
ಸೋಮವಾರ ಮಾತನಾಡಿದ್ದ ಯುಕೆ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್, "ಓಮಿಕ್ರಾನ್ ರೂಪಾಂತರದಿಂದಾಗಿ ಕನಿಷ್ಠ 10 ಮಂದಿಯಾದರೂ ಆಸ್ಪತ್ರೆಗೆ ದಾಖಲು ಆಗಿದ್ದಾರೆ," ಎಂದು ತಿಳಿಸಿದ್ದರು. ಓಮಿಕ್ರಾನ್ ಹಿನ್ನೆಲೆ ಬೂಸ್ಟರ್ ನೀಡಿಕೆಯನ್ನು ಹೆಚ್ಚಳಗೊಳಿಸಲಾಗಿದೆ ಎಂದು ಕೂಡಾ ಹೇಳಿದ್ದರು. ವಿಶ್ವ ಸಂಸ್ಥೆ ಏನು ಹೇಳುತ್ತದೆ? ಓಮಿಕ್ರಾನ್ ಕೊರೊನಾ ವೈರಸ್ ರೂಪಾಂತರವು ಡೆಲ್ಟಾಗಿಂತ ಹೆಚ್ಚು ಪ್ರಬಲವಾಗಿದ್ದು, ತೀವ್ರವಾಗಿ ಹರಡುತ್ತಿದೆ ಹಾಗೂ ಲಸಿಕೆ ಕೂಡ ಇದರ ಮೇಲೆ ಪರಿಣಾಮ ಬೀರುವಲ್ಲಿ ಅಷ್ಟೊಂದು ಯಶಸ್ವಿಯಾಗಿಲ್ಲ ಎಂಬ ಮಾಹಿತಿಯನ್ನು ಈಗಾಗಲೇ ಶ್ವ ಆರೋಗ್ಯ ಸಂಸ್ಥೆ (WHO) ನೀಡಿದೆ. ಓಮಿಕ್ರಾನ್ ರೂಪಾಂತರ ತೀವ್ರವಾದ ರೋಗಲಕ್ಷಣಗಳನ್ನುಂಟು ಮಾಡಲಿದೆ. ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ಮೊದಲು ಗುರುತಿಸಲಾದ ಡೆಲ್ಟಾ ರೂಪಾಂತರವು ಪ್ರಪಂಚದ ಹೆಚ್ಚಿನ ಕೊರೊನಾ ವೈರಸ್ ಸೋಂಕುಗಳಿಗೆ ಕಾರಣವಾಗಿದೆ ಎಂದು ಹೇಳಿದೆ. ಆರಂಭಿಕ ಪುರಾವೆಗಳು ಓಮಿಕ್ರಾನ್ ಸೋಂಕು ಮತ್ತು ಪ್ರಸರಣದ ವಿರುದ್ಧ ಲಸಿಕೆ ಪರಿಣಾಮಕಾರಿತ್ವದಲ್ಲಿ ಕಡಿತವನ್ನು ಉಂಟುಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಾಂತ್ರಿಕ ರೂಪದಲ್ಲಿ ಸಂಕ್ಷಿಪ್ತವಾಗಿ ಹೇಳಿದೆ. ಪ್ರಸ್ತುತ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ ಓಮಿಕ್ರಾನ್ ಡೆಲ್ಟಾ ಪ್ರಸರಣವನ್ನು ಮೀರಿ ಸಮುದಾಯದಲ್ಲಿ ಹರಡುವ ಸಾಧ್ಯತೆ ಹೆಚ್ಚಿದ್ದು, ಓಮಿಕ್ರಾನ್ ರೂಪಾಂತರ ಡೆಲ್ಟಾವನ್ನು ಮೀರಿಸುವ ಎಲ್ಲಾ ಸಾಧ್ಯತೆಗಳಿವೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಈ ವೇಳೆಯೇ ಇಲ್ಲಿಯವರೆಗೆ ಓಮಿಕ್ರಾನ್ ರೋಗಲಕ್ಷಣಗಳು ಸೌಮ್ಯವಾಗಿದ್ದು, ಅನಾರೋಗ್ಯ ಅಥವಾ ಲಕ್ಷಣರಹಿತ ಪ್ರಕರಣಗಳನ್ನು ಉಂಟುಮಾಡಿದೆ. ಆದರೆ ರೂಪಾಂತರದ ವೈದ್ಯಕೀಯ ತೀವ್ರತೆಯನ್ನು ಸ್ಥಾಪಿಸಲು ಈಗಿರುವ ಅಂಕಿ ಅಂಶಗಳು ಸಾಕಾಗುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

