ಕಾಸರಗೋಡು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಡಿ. 21ರಂದು ಕಾಸರಗೋಡಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೇರಳ ಕೇಂದ್ರ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಹೆಲಿಪ್ಯಾಡ್ ಆಸುಪಾಸು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್ ನೇತೃತ್ವದ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಅವಲೋಕನ ನಡೆಸಿದರು. ಹೆಲಿಪ್ಯಾಡ್ ಹಾಗೂ ಕ್ಯಾಂಪಸ್‍ನೊಳಗೆ ನಡೆಸಲಾಗಿರುವ ಸಿದ್ಧತಾ ಕಾರ್ಯಗಳನ್ನೂ ಅವಲೋಕಿಸಿದರು. ಅಪರ ಜಿಲ್ಲಾಧಿಕಾರಿ ಡಿ.ಆರ್ ಮೇಘಶ್ರೀ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಆರ್ ರಾಜೀವ್, ಆರ್.ಡಿ.ಓ ಅತುಲ್ ಸ್ವಾಮಿನಾಥನ್, ಕಂದಾಯ ಇಲಾಖೆ ಅಧಿಕರಿಗಳು, ಕೇಂದ್ರ ವಿಶ್ವವಿದ್ಯಾಳಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ರಾಷ್ಟ್ರಪತಿ ಅವರು ಡಿ. 21ರಂದು ಮಧ್ಯಾಹ್ನ 3.30ಕ್ಕೆ ಕೇರಳ ಕೇಂದ್ರ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಪೆರಿಯ ಕ್ಯಾಂಪಸ್ ಎದುರು ಸಿದ್ಧಪಡಿಸಲಾದ ಬೃಹತ್ ವೇದಿಕೆಯಲ್ಲಿ ಕಾರ್ಯಕ್ರಮ ಜರುಗಲಿದ್ದು, 2015-2020ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡುವರು.




