ಕಾಸರಗೋಡು: ಕಳೆದ ಒಂದೂವರೆ ವರ್ಷದಿಂದ ಕೇರಳದಲ್ಲಿ ತರಕಾರಿ ಬೆಲೆ ಎರಡು ಪಟ್ಟಿನಷ್ಟು ಹೆಚ್ಚಳವುಂಟಾಗಿರುವ ಬಗ್ಗೆ ರಾಜ್ಯ ಆರ್ಥಿಕ ಸ್ಥಿತಿಗತಿ ವಿಭಾಗ ಮಾಹಿತಿ ನೀಡಿದೆ. ಸುಮಾರು 50ನಿತ್ಯೋಪಯೋಗಿ ವಸ್ತುಗಳಲ್ಲಿ 40ರಷ್ಟು ಉತ್ಪನ್ನಗಳ ಬೆಲೆ ಗಗನಕ್ಕೇರಿದ್ದು, ಬೆಲೆ ನಿಯಂತ್ರಣಕ್ಕೆ ಸರ್ಕಾರ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಲಿದೆ ಎಂಬುದಾಗಿ ಮಾಹಿತಿ ತಿಳಿಸಿದೆ.
2020ರ ವೇಳೆಗೆ ಸೌತೆಕಾಯಿ ಧಾರಣೆ ಕಿಲೋ ಒಂದಕ್ಕೆ ಸರಾಸರಿ 20 ರೂ. ಆಗಿದ್ದಲ್ಲಿ, 2021ರ ವೇಳೆಗೆ 60ರ ಗಡಿ ದಾಟಿದ್ದು, ಶೇ. 156ರಷ್ಟು ಬೆಲೆಯೇರಿಕೆ ಉಂಟಾಗಿದೆ. 35ರೂ. ಅಂಚಿನಲ್ಲಿದ್ದ ಬೆಂಡೆಕಾಯಿ ಧಾರಣೆ 80ರ ಅಂಚಿಗೆ ತಲುಪಿದೆ. ಟೊಮೆಟಾ ಬೆಲೆಯಲ್ಲೂ ಶೇ. 124ರ ಹೆಚ್ಚಳವುಂಟಾಗಿದೆ. ಬದನೆಕಾಯಿ, ಕ್ಯಾಬೇಜ್, ಹಸಿಮೆಣಸು, ನುಗ್ಗೆ ಮುಂತಾದ ಉತ್ಪನ್ನಗಳ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿದ್ದರೆ, ಬಟಾಟೆ, ಈರುಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯುಂಟಾಗಿದೆ.
ಆರ್ಥಿಕ ಸ್ಥಿತಿ ಬಗ್ಗೆ ಅವಲೋಕನ ನಡೆಸುವ ವಿಭಾಗ ಪ್ರತಿ ದಿನ 50ರಷ್ಟು ನಿತ್ಯೋಪಯೋಗಿ ಸಾಮಗ್ರಿಗಳ ಬೆಲೆಯ ಬಗ್ಗೆ ಅವಲೋಕನ ನಡೆಸುತ್ತಿದ್ದು, ಇದರಲ್ಲಿ 17 ಉತ್ಪನ್ನಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೆ, 11ಉತ್ಪನ್ನಗಳ ಬೆಲೆಯಲ್ಲಿ ಇಳಿಕೆಯಾಗಿರುವುದಾಗಿ ರಾಜ್ಯ ಆರ್ಥಿಕ ಸ್ಥಿತಿಗತಿ ವಿಭಾಗ ತಿಳಿಸಿದೆ.




