ಕಾಸರಗೋಡು: ಜಿಲ್ಲೆಯ ಮೂವರು ಯುವಕರು ಬದರೀನಾಥದಿಂದ ಶಬರಿಮಲೆಯವರೆಗೆ ಪಾದಯಾತ್ರೆ ಮಾಡುತ್ತಿದ್ದು, ತಲಪ್ಪಾಡಿ ಮೂಲಕ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಕೂಡ್ಲು ಶ್ರೀ ವಿಷ್ಣುಮಂಗಲ ದೇವಸ್ಥಾನ ಸಮೀಪದ ಸನತ್ ಕುಮಾರ್ ನಾಯಕ್, ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನ ಮಂದಿರ ಬಳಿಯ ಪ್ರಶಾಂತ್ ಮತ್ತು ಕೂಡ್ಲು ಮೀಪುಗುರಿಯ ಸಂಪತ್ ಕುಮಾರ್ ಶೆಟ್ಟಿ ಎಂಬವರು ಜುಲೈ 31ರಂದು ಕೂಡ್ಲು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾಲೆ ಧರಿಸಿ ಆಗಸ್ಟ್ 27ರಂದು ಕಾಸರಗೋಡಿನಿಂದ ರೈಲಿನ ಮೂಲಕ ಋಷಿಕೇಶಕ್ಕೆ ತೆರಳಿ ಅಲ್ಲಿಂದ ರಸ್ತೆ ಮೂಲಕ ಸೆಪ್ಟೆಂಬರ್ 1ರಂದು ಬದರೀನಾಥ್ ತಲುಪಿದ್ದರು.
ಶ್ರೀ ದೇವರ ದರ್ಶನ ಪಡೆದು, ಸೆಪ್ಟೆಂಬರ್ 3ರಂದು ಬದರೀನಾಥದ ಶ್ರೀ ಬದರೀನಾರಾಯಣ ಸನ್ನಿಧಾನದಲ್ಲಿ ಇರುಮುಡಿ ಕಟ್ಟಿ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದೆಡೆಗೆ ತಮ್ಮ ಪಾದಯಾತ್ರೆ ಆರಂಭಿಸಿದ್ದಾರೆ. ನವೆಂಬರ್ 12ರಂದು ಇವರ ತಂಡವನ್ನು ಪುಣೆ ಸಮೀಪದ ಕತ್ರಾಜ್ ಎಂಬಲ್ಲಿ ಮೂಲತಃ ಹೆಜಮಾಡಿಯವರಾದ ಶಿವ ಕರ್ಕೇರಾ ಅವರು ಸೇರಿಕೊಂಡಿದ್ದಾರೆ.
ದಿನಕ್ಕೆ ಸರಾಸರಿ 30 ಕಿ.ಮೀ. ದೂರವನ್ನು ಸ್ವಾಮಿ ಶರಣಂ ಉದ್ಘೋಷದೊಂದಿಗೆ ಕ್ರಮಿಸುವ ಇವರು ಈವರೆಗೆ 3,200 ಕಿ.ಮೀ. ದೂರವನ್ನು ಬರಿಗಾಲಲ್ಲಿ ಸಾಗಿ ಬಂದಿದ್ದಾರೆ. ಕಾಸರಗೋಡು ನಗರಕ್ಕೆ ಶನಿವಾರ ಆಗಮಿಸಿದ ವ್ರತಧಾರಿಗಳನ್ನು ಚೌಕಿ ಯಲ್ಲಿ ಧಾರ್ಮಿಕ ಮುಂದಳು ಶ್ರೀ ಕೆ. ಎನ್.ವೆಂಕಟ್ರಮಣ ಹೊಳ್ಳ ಅವರ ನೇತೃತ್ವ ದಲ್ಲಿ ಕಾವು ಮಠ ತಂತ್ರಿ ವರ್ಯಾರಾದ ಶ್ರೀ ಪ್ರಕಾಶ್ ತಂತ್ರಿ ಯವರು ಶಾಲು ಹೊದಿಸಿ ಸನ್ಮಾನಿಸಿ ಬರಮಾಡಿ ಕೊಂಡರು. ನಗರ ಸಭಾ ಸದಸ್ಯೆ ಅಶ್ವಿನಿ.ಜಿ. ನಾಯ್ಕ್ ಉಪಸ್ಥಿತರಿದ್ದರು. ಕಾಸರಗೋಡಿನ ಕೇಳುಗುಡ್ಡೆ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದಲ್ಲಿ ಇಂದು ತಂಗಲಿರುವ ವ್ರತಧಾರಿಗಳು ನಂತರ 3-4 ದಿನಗಳ ಕಾಲ ಸಮೀಪದ ಕೆಲವು ದೇವಸ್ಥಾನಗಳ ದರ್ಶನಗೈದು 22 ರಂದು ಶಬರಿಮಲೆ ಸನ್ನಿಧಾನದೆಡೆಗೆ ಪಾದಯಾತ್ರೆ ಮುಂದುವರಿಸಲಿದ್ದಾರೆ. ಮಕರ ಸಂಕ್ರಮಣ ವೇಳೆಗೆ ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನ ತಲುಪಲಿರುವ ವ್ರತಧಾರಿಗಳ ತಂಡ ಒಟ್ಟು 3,700 ಕಿ.ಮೀ. ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಲಿದ್ದು, ಇದು ಇವರ ಬೃಹತ್ ಪಾದಯಾತ್ರೆಯಾಗಲಿದೆ.




