HEALTH TIPS

ಕೇಂದ್ರದ ಜೊತೆ ಚರ್ಚೆಗೆ ಸಂಯುಕ್ತ ಕಿಸಾನ್ ಮೋರ್ಚಾದ ಐವರು ಸದಸ್ಯರ ಸಮಿತಿ ರಚನೆ

                ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮಸೂದೆಗೆ ಕೇಂದ್ರ ಸರ್ಕಾರವು ಉಭಯ ಸದನಗಳಲ್ಲಿ ಈಗಾಗಲೇ ಅಂಗೀಕರಿಸಿದೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರದ ಜೊತೆಗೆ ಚರ್ಚಿಸಲು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಐವರು ಸದಸ್ಯರ ಸಮಿತಿಯನ್ನು ರಚಿಸಿದೆ.

             ಉತ್ತರ ಪ್ರದೇಶದ ಯುಧವೀರ್ ಸಿಂಗ್, ಸಂಸದ ಶಿವಕುಮಾರ್ ಕಾಕ್ಕಾ, ಪಂಜಾಬಿನ ಬಲ್ಬೀರ್ ರಾಜೇವಾಲ್ , ಮಹಾರಾಷ್ಟ್ರದ ಅಶೋಕ್ ಧಾವಲೆ, ಹರಿಯಾಣದ ಗುರ್ನಾಮ್ ಸಿಂಗ್ ಚಧುನಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ರೈತ ಸಂಘದ ಪರವಾಗಿ ಸರ್ಕಾರದೊಂದಿಗೆ ಈ ಸಮಿತಿಯು ಮಾತುಕತೆ ನಡೆಸಲಿದೆ.
                ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರೈತರ ಆಂದೋಲನದ ನೇತೃತ್ವವನ್ನು ವಹಿಸಿಕೊಂಡಿರುವ ಸಂಯುಕ್ತ ಕಿಸಾನ್ ಮೋರ್ಚಾದ ಮುಂದಿನ ಸಭೆಯು ಡಿಸೆಂಬರ್ 7ರಂದು ನಡೆಯಲಿದ್ದು, ರೈತ ಸಂಘಟನೆಗಳ ನಡೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
              SKM ಐವರು ಸದಸ್ಯರ ಸಮಿತಿ ರಚಿಸಿದ್ದು ಏಕೆ?

* ಕೆಲವು ರೈತರ ಮನವಿಗೆ ವೈಯಕ್ತಿಕವಾಗಿ ಸ್ಪಂದಿಸುವುದರ ಕೇಂದ್ರ ಸರ್ಕಾರವು ರೈತರಲ್ಲಿ ಒಡಕು ಮೂಡಿಸುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ
* ಸಂಯುಕ್ತ ಕಿಸಾನ್ ಮೋರ್ಚಾ ಈಗ ಐವರು ಸದಸ್ಯರ ಸಮಿತಿಯನ್ನು ರಚಿಸಿದೆ. ಕೇಂದ್ರ ಸರ್ಕಾರವು ಔಪಚಾರಿಕ ಮಾತುಕತೆಗೆ ಈ ಪೈಕಿ ಯಾರನ್ನಾದರೂ ಸಂಪರ್ಸಿಸಬಹುದು.
* ಕೇಂದ್ರ ಸರ್ಕಾರವು ಸಂಯುಕ್ತ ಕಿಸಾನ್ ಮೋರ್ಚಾವನ್ನು ಚರ್ಚೆಗೆ ಆಹ್ವಾನಿಸಿದರೆ, ಆಗ ಸಮಿತಿಯ ಈ ಐವರು ಸದಸ್ಯರು ರೈತ ಸಂಘವನ್ನು ಪ್ರತಿನಿಧಿಸುತ್ತಾರೆ. ರೈತರ ಪರವಾಗಿ ಕೇಂದ್ರದ ಜೊತೆಗೆ ಚರ್ಚೆ ನಡೆಸುತ್ತಾರೆ.
* ಕೇಂದ್ರ ಸರ್ಕಾರದೊಂದಿಗಿನ ಸಭೆಯ ನಂತರದಲ್ಲಿ ಈ ಐವರು ಸದಸ್ಯರ ಸಮಿತಿಯು ರೈತ ಸಂಘಟನೆಗಳ ಸಭೆಯನ್ನು ನಡೆಸಲಿದ್ದು, ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ.

                        ಕೃಷಿ ಕಾಯ್ದೆ ರದ್ಧತಿ ರೈತರ ಗೆಲುವಿನ ಸಂಕೇತ:
        ಏತನ್ಮಧ್ಯೆ, ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಅಶೋಕ್ ಧಾವಳೆ, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದು "ಭಾರತೀಯ ರೈತರಿಗೆ ದೊಡ್ಡ ಗೆಲುವು" ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಕಾನೂನು, ವಿದ್ಯುತ್‌ ಬಿಲ್‌ ಮತ್ತು ಪಾರಾಲಿ ಬಿಲ್‌ ಜಂಕ್‌, ರೈತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವುದು, ಆಂದೋಲನದ ವೇಳೆ ಮೃತಪಟ್ಟ 700 ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಮುಂತಾದ ಬೇಡಿಕೆಗಳನ್ನು ರೈತ ಸಂಘ ಮುಂದಿಡಲಿದೆ ಎಂದು ಹೇಳಿದರು.
ಇದಲ್ಲದೇ ನವದೆಹಲಿಯ ಕೆಂಪು ಕೋಟೆ ಹಿಂಸಾಚಾರದ ಸಂದರ್ಭದಲ್ಲಿ ದಾಖಲಿಸಲಾದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು. ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ರನ್ನು ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕೊಲೆ ಆರೋಪದಡಿಯಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯಿಸಿದೆ.

                                  ಸಂಸತ್ ಅಧಿವೇಶನದಲ್ಲಿ ಮಸೂದೆ ಅಂಗೀಕಾರ:
            ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮಸೂದೆಯನ್ನು ಸಂಸತ್ತಿನ ಅಧಿವೇಶನದ ಮೊದಲ ದಿನವೇ ಉಭಯ ಸದನಗಳಲ್ಲಿ ಅಂಗೀಕರಿಸಲಾಗಿದೆ. ಹೊಸ ಮಸೂದೆಯ ಮೇಲೆ ಚರ್ಚೆ ನಡೆಸುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿದ್ದವು. ಇದರ ಹೊರತಾಗಿಯೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಕೃಷಿ ಕಾಯ್ದೆಗಳ ರದ್ದತಿ ಮಸೂದೆ, 2021 ಅನ್ನು ಲೋಕಸಭೆಯಲ್ಲಿ ಮಂಡಿಸಿದರು. ಧ್ವನಿಮತದ ಮೂಲಕ ಕೇಂದ್ರ ಸರ್ಕಾರವು ಮಸೂದೆಯನ್ನು ಅಂಗೀಕರಿಸಿದೆ. ತದನಂತರ ರಾಜ್ಯಸಭೆಯಲ್ಲೂ ಯಾವುದೇ ರೀತಿ ಚರ್ಚೆಯಿಲ್ಲದೇ ಅಂಗೀಕರಿಸಲಾಗಿತ್ತು.

                      ರೈತ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರ ಸಾವು:
ಕೇಂದ್ರ ಸರ್ಕಾರದ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020, (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಅನ್ನು ರದ್ದುಗೊಳಿಸುವುದಕ್ಕಾಗಿ ಕೃಷಿ ಕಾಯ್ದೆ ರದ್ಧತಿ 2021ರ ಮಸೂದೆಯನ್ನು ರಚಿಸಲಾಗಿತ್ತು. ಈ ಹಿಂದೆ ನವೆಂಬರ್ 24ರಂದು ಈ ಸಂಬಂಧ ಕೇಂದ್ರ ಸಂಪುಟದ ಅನುಮೋದನೆಯನ್ನು ಪಡೆದುಕೊಳ್ಳಲಾಗಿತ್ತು.

               ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ ವಿವಿಧ ರೈತ ಸಂಘಗಳ ಆಶ್ರಯದಲ್ಲಿ ಸಾವಿರಾರು ರೈತರು ಕಳೆದ 2020ರ ನವೆಂಬರ್ 26 ರಿಂದ ದೆಹಲಿಯ ಘಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಮೇಲೆ ಖಾಸಗೀಕರಣವನ್ನು ಹೇರುತ್ತಿರುವುದಕ್ಕೆ ಹಾಗೂ ಕಾರ್ಪೊರೇಟ್‌ಗಳ ಪರ ಒಲವು ಹೊಂದಿರುವ ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದಿರುವ ಹಾಗೂ ಈಗಲೂ ಮುಂದುವರಿದಿರುವ ರೈತರ ಆಂದೋಲಯದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣಬಿಟ್ಟಿದ್ದರು ಎಂದು ರೈತ ಮುಖಂಡರು ಹೇಳಿದ್ದು, ಎಲ್ಲರ ಕುಟುಂಬಕ್ಕೂ ಪರಿಹಾರ ನೀಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries