ರಾಜ್ಯಗಳ ಹಣಕಾಸು ಸ್ಥಿತಿ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈಚೆಗೆ ಬಿಡುಗಡೆ ಮಾಡಿರುವ ವರದಿಯು ನಿರಾಶಾದಾಯಕ ಚಿತ್ರಣವೊಂದನ್ನು ನೀಡಿದೆ. ರಾಜ್ಯಗಳು ಮುಂದಿನ ದಿನಗಳಲ್ಲಿ ಎದುರಿಸಬಹುದಾದ ಸವಾಲುಗಳ ಬಗ್ಗೆ ಒಂದಿಷ್ಟು ವಿವರಗಳನ್ನು ಕೂಡ ಈ ವರದಿಯು ನೀಡುತ್ತದೆ.
ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳನ್ನು ಇನ್ನಷ್ಟು ಸಶಕ್ತಗೊಳಿಸುವ ಅಗತ್ಯದ ಬಗ್ಗೆಯೂ ಆರ್‌ಬಿಐ ವರದಿ ಒತ್ತಿ ಹೇಳಿದೆ. ಸ್ಥಳೀಯ ಸಂಸ್ಥೆಗಳ ಕುರಿತು ಆರ್‌ಬಿಐ ಸಮೀಕ್ಷೆಯೊಂದನ್ನು ನಡೆಸಿದ್ದು, ಸಾಂಕ್ರಾಮಿಕದ ಸಂದರ್ಭದಲ್ಲಿ ಅವುಗಳ ಹಣಕಾಸು ಸ್ಥಿತಿ ಹದಗೆಟ್ಟರೆ, ಅವು ಸ್ಥಳೀಯರಿಗೆ ಒದಗಿಸಬಹುದಾದ ಸೇವೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬ ಅಂಶವನ್ನು ಸಮೀಕ್ಷೆಯು ಕಂಡುಕೊಂಡಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ತಾವು ಹಿಂದೆ ಮಾಡಿರದಿದ್ದ ಹಲವು ಕೆಲಸಗಳನ್ನು ಮಾಡಬೇಕಾದ ಸನ್ನಿವೇಶ ಎದುರಾಗಿತ್ತು. ಅವು, ಕೋವಿಡ್ ಹರಡುವುದನ್ನು ತಡೆಯಲು ಜನರನ್ನು ಸಾಂಸ್ಥಿಕ ಪ್ರತ್ಯೇಕವಾಸಕ್ಕೆ ಒಳಪಡಿಸಬೇಕಿತ್ತು. ಕೋವಿಡ್ ಪರೀಕ್ಷೆಗಳನ್ನು ನಡೆಸಬೇಕಿತ್ತು ಕೂಡ. ಇಂತಹ ಕೆಲಸಗಳ ಮೂಲಕ ಸ್ಥಳೀಯ ಸಂಸ್ಥೆಗಳು ಪಡೆದ ಅನುಭವವು, ಅವುಗಳಿಗೆ ಮುಂದೊಂದು ದಿನ ನೆರವಿಗೆ ಬರಬಹುದು. ಆದರೆ, ಸ್ಥಳೀಯ ಸಂಸ್ಥೆಗಳ ಪೈಕಿ ಶೇಕಡ 98ರಷ್ಟು ಸಂಸ್ಥೆಗಳ ವೆಚ್ಚವು ಹೆಚ್ಚಾಯಿತು, ವರಮಾನ ತಗ್ಗಿತು. ಅವು ಬೇರೆ ಕಡೆಯಿಂದ ಹಣವನ್ನು ಸಾಲವಾಗಿ ಪಡೆಯಬೇಕಾಯಿತು. ತಮ್ಮ ಮೀಸಲು ನಿಧಿಯನ್ನು ಕೂಡ ಬಳಸಿಕೊಳ್ಳಬೇಕಾಯಿತು. ಈ ಬಗೆಯ ಹಣಕಾಸಿನ ಸಮಸ್ಯೆಗಳು ಅವುಗಳಿಗೆ ಮೂಲಸೌಕರ್ಯ ನಿರ್ಮಾಣದಲ್ಲಿ, ಸೌಲಭ್ಯಗಳನ್ನು ಉತ್ತಮಪಡಿಸುವಲ್ಲಿ ಅಡ್ಡಿಯಾಗಿ ನಿಲ್ಲುತ್ತವೆ.
ಸ್ಥಳೀಯ ಸಂಸ್ಥೆಗಳ ಹಣಕಾಸಿನ ಸ್ವಾಯತ್ತೆಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಆರ್‌ಬಿಐ ಸಲಹೆ ನೀಡಿದೆ. ಈ ಸಂಸ್ಥೆಗಳಲ್ಲಿನ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿದೆ ಎಂದು ಕೂಡ ಆರ್‌ಬಿಐ ಹೇಳಿದೆ. ಆಸ್ತಿ ತೆರಿಗೆಯು ಸ್ಥಳೀಯ ಸಂಸ್ಥೆಗಳ ಪಾಲಿನ ಪ್ರಮುಖ ವರಮಾನ ಮೂಲ. ಆದರೆ ಅವುಗಳಿಗೆ ತೆರಿಗೆಗಳ ಮೂಲಕ ವರಮಾನ ಹೆಚ್ಚಿಸಿಕೊಳ್ಳಲು ಅವಕಾಶ ಇದೆ. ಕೆಲವು ಸ್ಥಳೀಯ ಸಂಸ್ಥೆ ಗಳು ವರಮಾನ ಸಂಗ್ರಹಿಸಲು ಬಾಂಡ್‌ಗಳನ್ನು ಹೊರಡಿಸಿದ್ದು ಕೂಡ ವರದಿಯಲ್ಲಿ ದಾಖಲಾಗಿದೆ. ಆಗಬೇಕಿರುವ ಹಣಕಾಸಿನ ಸುಧಾರಣೆಗಳು ಏನು ಎಂಬುದನ್ನು ಆರ್‌ಬಿಐ ವರದಿ ಹೇಳಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಇನ್ನಷ್ಟು ಪಾರದರ್ಶಕ ಆಗಿಸಬೇಕಿದೆ ಎಂದು ಕೂಡ ವರದಿ ಹೇಳಿದೆ. ಸ್ಥಳೀಯ ಸಂಸ್ಥೆಗಳಿಗೆ ಅಗತ್ಯವಿರುವ ಬೆಂಬಲವನ್ನು ರಾಜ್ಯ ಸರ್ಕಾರಗಳು ಒದಗಿಸಬೇಕು, ಸ್ಥಳೀಯ ಸಂಸ್ಥೆಗಳಿಗೆ ಅವು ಹೆಚ್ಚಿನ ಅಧಿಕಾರ ನೀಡಬೇಕು. ಇವು ಸಾಧ್ಯವಾಗುವುದಕ್ಕೆ ಬೇಕಿರುವ ನೀತಿಗಳನ್ನು ರೂಪಿಸಬೇಕು ಎಂಬ ಮಾತು ಕೂಡ ಆರ್‌ಬಿಐ ವರದಿಯಲ್ಲಿ ಇದೆ. ಆರೋಗ್ಯ ವಲಯದ ಮೇಲಿನ ವೆಚ್ಚವು ಒಟ್ಟು ಜಿಡಿಪಿಯ ಶೇಕಡ 2.5ರಷ್ಟಕ್ಕೆ ಹೆಚ್ಚಾಗಬೇಕು ಎಂಬ ಮಾತನ್ನು ಆರ್‌ಬಿಐ ಒತ್ತಿ ಹೇಳಿದೆ. ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯ ವಲಯದ ಮೇಲಿನ ವೆಚ್ಚವು ಒಟ್ಟು ಜಿಡಿಪಿಯ ಶೇಕಡ 1.5ರಷ್ಟು ಮಾತ್ರವೇ ಇದೆ.

