ಕುಂಬಳೆ: ವೃದ್ದರೋರ್ವರು ಮೊಮ್ಮಗಳನ್ನು ಪೀಡಿಸಿದರೆಂದು ಆರೋಪಿಸಿರುವ ದೂರಿನಲ್ಲಿ ಹೇಳಿಕೆ ಬದಲಾಯಿಸಿರುವುದು ಬಾಹ್ಯ ಒತ್ತಡದ ಕಾರಣದಿಂದ ಎಂದು ಬಾಲಕಿಯ ತಂದೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೋಲೀಸರಿಗೆ ನೀಡಿದ ದೂರಿನಲ್ಲಿ ಹೇಳಿರುವುದಕ್ಕಿಂತ ವ್ಯತ್ಯಸ್ಥವಾದ ಹೇಳಿಕೆಯನ್ನು ಮೇಜಿಸ್ಟ್ರೇಟರ ಮುಂದೆ ರಹಸ್ಯವಾಗಿ ನೀಡಿದ್ದು, ಬಾಹ್ಯ ಒತ್ತಡ, ಬೆದರಿಕೆಯ ಕಾರಣ ಹೀಗೆ ಹೇಳಿಕೆ ನೀಡಲಾಯಿತೆಂದು ಬಾಲಕಿಯ ತಂದೆ ಕುಂಬಳೆಯ ಪ್ರೆಸ್ ಪೋರಂ ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅರವತ್ತೊಂಬತ್ತು ವರ್ಷದ ಮಹಮೂದ್ ಹಾಜಿಯನ್ನು ಮಕ್ಕಳ ಕಿರುಕುಳದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ಒಂದೂವರೆ ತಿಂಗಳ ಹಿಂದೆ ಬಂಧಿಸಿದ್ದರು. ಡಿವೈಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಹಿರಿಯ ಪೋಲೀಸ್ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರು ರಾಜಕೀಯ ಪ್ರಭಾವ ಬೀರಿ ಮರು ತನಿಖೆಗೆ ನಾಂದಿ ಹಾಡಿದ್ದಾರೆ ಎಂದೂ ತಂದೆ ಹೇಳಿದ್ದಾರೆ.
ಪೋಲೀಸರ ತಂಡ ಮನೆಗೆ ತೆರಳಿ ಮಗುವಿನೊಂದಿಗೆ ಮಾತುಕತೆ ನಡೆಸಿ ಪ್ರಕರಣದ ಕುರಿತು ವಿಚಾರಿಸಿ ವಿಡಿಯೋ ಚಿತ್ರೀಕರಣ ಮಾಡಿದೆ. ದೂರಿನಲ್ಲಿ ಹೇಳಿರುವ ವಿಷಯದಿಂದ ಮಗು ಹಿಂದೆ ಸರಿಯಲಿಲ್ಲ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಕಾಸರಗೋಡು ತಾಲೂಕು ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್ ನಡೆಸಲಾಯಿತು. ಇದಕ್ಕಾಗಿ ಮಗುವಿಗೆ ಮೂರು ದಿನ ತರಗತಿ ತಪ್ಪಿದ್ದು, ಕ್ರೀಡಾ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿದ್ದ ಮಗುವಿಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮಗು ಮಾನಸಿಕವಾಗಿ ನೊಂದಿತ್ತು. ಇದೇ ವೇಳೆ ಆರನೇ ದಿನ ಪೋಲೀಸರು ಬಾಲಕಿಯನ್ನು ಮಕ್ಕಳ ಕಲ್ಯಾಣ ಕಚೇರಿಗೆ ಕರೆ ತಂದರು. ಅಧಿಕಾರಿಗಳು ತನ್ನೊಂದಿಗೆ ಮಾತನಾಡಿದ ನಂತರ ಬಾಲಕಿಯನ್ನು ವಶಕ್ಕೆ ಪಡೆಯುವುದಾಗಿ ತಿಳಿಸಿದರು. ಹದಿಹರೆಯದ ಹುಡುಗಿ ಈ ಸ್ಥಿತಿಯಲ್ಲಿರುವುದು ಅವಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಅವಳ ಕಲಿಕೆಗೆ ಅಡ್ಡಿಯಾಗುತ್ತದೆ ಎಂದು ಬಾಲಕಿಯ ತಂದೆ ಹೇಳಿದರು. ತಾನು ಮಾನಸಿಕವಾಗಿ ನೊಂದಿದ್ದೇನೆ ಎಂದ ಅವರು, ಅಧಿಕಾರಿಗಳು ತಮ್ಮ ಮಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಹಾಗೂ ಪೋಲೀಸ್ ಅಧಿಕಾರಿಗಳ ಮಕ್ಕಳ ವಿರೋಧಿ ಧೋರಣೆ ವಿರುದ್ಧ ಮುಖ್ಯಮಂತ್ರಿ ಸೇರಿದಂತೆ ಉನ್ನತಾಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಒಂದೂವರೆ ತಿಂಗಳ ಹಿಂದೆ ದೂರು ದಾಖಲಾಗಿತ್ತು. ಮಗುವಿನ ಪೋಷಕರು ಸುಮಾರು ಒಂದೂವರೆ ವರ್ಷದಿಂದ ಬೇರೆಯಾಗಿ ವಾಸಿಸುತ್ತಿದ್ದಾರೆ. ಅಂದಿನಿಂದ, ಬಾಲಕಿಯ ತಾಯಿ ಅವರ ತಂದೆಯಾದ ಪೀಡಕ ಅಜ್ಜನೊಂದಿಗೆ ವಾಸಿಸುತ್ತಿದ್ದಾರೆ. ತನ್ನ ಇತರ ಎರಡು ಪುತ್ರರು ತನ್ನೊಂದಿಗೇ ವಾಸಿಸುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಅಜ್ಜ ಮರು ವಿವಾಹವಾದ. ಆ ಬಳಿಕ ಪುತ್ರಿ ಅಜ್ಜನ ಮನೆಯಿಂದ ತನ್ನೊಂದಿಗೆ ಬಂದು ವಾಸಿಸಲು ಆರಂಭಿಸಿದಳು. ಈ ವೇಳೆ ತನ್ನ ತಾಯಿಯ ತಂದೆ ತನಗೆ ದೈಹಿಕ ಕಿರುಕುಳ ನೀಡಿದ್ದನ್ನು ಮಗು ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ತಾನು ದೂರಿಗೆ ಮುಂದಾಗಿದ್ದಾಗಿ ತಿಳಿಸಿದರು.

