ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಫಿರೋಜ್ ಪುರ ಭೇಟಿ ವೇಳೆ ಉಂಟಾದ ಭದ್ರತಾ ಲೋಪಗಳ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗುರುವಾರ ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ಪ್ರಧಾನ ಮಂತ್ರಿಗಳು ಹೋಗುತ್ತಿದ್ದ ವಾಹನಕ್ಕೆ ಭದ್ರತಾ ಲೋಪ ಉಂಟಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರಪತಿಗಳು ಈಗಾಗಲೇ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇನ್ನು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸಹ ಪ್ರಧಾನ ಮಂತ್ರಿಗಳ ಜೊತೆ ಮಾತನಾಡಿ ಭದ್ರತಾ ಲೋಪ ಉಂಟಾಗಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.
ಪಂಜಾಬ್ ಗೆ ಹೊರಟ ಪ್ರಧಾನ ಮಂತ್ರಿಗಳನ್ನು ಅರ್ಧದಾರಿಯಲ್ಲಿ ಪ್ರತಿಭಟನಾಕಾರರು ತಡೆದು ಅವರು ದೆಹಲಿಗೆ ವಾಪಸ್ಸಾಗಿದ್ದು ದೇಶ ಮಟ್ಟದಲ್ಲಿ ಭಾರೀ ಸುದ್ದಿಯಾಗಿದ್ದು ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ. ಚುನಾವಣೆ ಸನ್ನಿಹಿತವಾಗಿರುವ ಪಂಜಾಬ್ ನಲ್ಲಿ ಇದು ರಾಜಕೀಯವಾಗಿ ಸದ್ದುಮಾಡುತ್ತಿದೆ.
ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಪಂಜಾಬ್ ಸರ್ಕಾರ ಆದೇಶ ನೀಡಿದ್ದು ಇನ್ನು ಮೂರು ದಿನಗಳಲ್ಲಿ ವರದಿ ಸಲ್ಲಿಕೆಯಾಗಲಿದೆ. ಘಟನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ನಾಳೆ ಅರ್ಜಿ ವಿಚಾರಣೆ ನಡೆಯಲಿದೆ.

