ಚೆನ್ನೈ: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಈ ಬಾರಿ ತಮಿಳುನಾಡಿನ ಟ್ಯಾಬ್ಲೋವನ್ನು ಸೇರಿಸದಿದ್ದಕ್ಕಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಈ ವರ್ಷದ ಗಣತಂತ್ರದ ಪರೇಡ್‌ನಲ್ಲಿ ದೆಹಲಿ, ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಇತರ ಕೆಲ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಕೇಂದ್ರ ಆಯ್ಕೆ ಸಮಿತಿಯು ಅನುಮತಿ ನೀಡಿಲ್ಲ.
ಮತ್ತೊಂದೆಡೆ ಭಾಷಾವಾರು ವಿಚಾರದಲ್ಲಿ ಸಿಎಂ ಸ್ಟಾಲಿನ್ ನಿರಂತರವಾಗಿ ದನಿಯೆತ್ತಿದ್ದು, ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ನಾವು ಹಿಂದಿಯನ್ನು ವಿರೋಧಿಸುವುದಿಲ್ಲ, ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸುತ್ತೇವೆ. ನಾವು ತಮಿಳು ಪ್ರೇಮಿಗಳು ಎಂದರೆ ಬೇರೆ ಭಾಷೆಗಳನ್ನು ದ್ವೇಷಿಸುತ್ತೇವೆ ಎಂದಲ್ಲ. ನಾವು ತಮಿಳು ಮಾತನಾಡುತ್ತೇವೆ ಎಂದ ಮಾತ್ರಕ್ಕೆ ನಾವು ಸಂಕುಚಿತ ಮನಸ್ಸಿನವರು ಎಂದು ಅರ್ಥವಲ್ಲ.' ಎಂದು ಸ್ಟಾಲಿನ್ ಹೇಳಿದ್ದಾರೆ.
'ಹಿಂದಿಯನ್ನು ಹೇರಲು ಹೊರಟಿರುವ ಶಕ್ತಿಗಳು ಎಲ್ಲ ಇಲಾಖೆಗಳಲ್ಲಿ ಹಿಂದಿ ಭಾಷಿಕರನ್ನು ಕರೆತಂದು ಹಿಂದಿಯೇತರರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಮುಂದಾಗಿವ' ಎಂದು ಸಿಎಂ ಸ್ಟಾಲಿನ್ ಆರೋಪಿಸಿದ್ದಾರೆ.

