ಕುಂಬಳೆ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ನಾಂಗಿ ಅಬ್ದುಲ್ಲ ಮಾಸ್ತರ್ ಅವರು ಪತ್ರಕರ್ತರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಹೇಳಿದರು.
ಕುಂಬಳೆ ಪ್ರೆಸ್ ಫೆÇೀರಂ ಸಭಾಂಗಣಕ್ಕೆ ನಾಂಗಿ ಅಬ್ದುಲ್ಲ ಮಾಸ್ತರ್ ಹೆಸರಿರಿಸುವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಪತ್ರಿಕೋದ್ಯಮ ಸ್ಪರ್ಧಾತ್ಮಕ ಹಾಗೂ ಸವಾಲುಗಳ ಮಧ್ಯೆ ಧಾವಂತದಿಂದ ನಾಗಾಲೋಟದಲ್ಲಿದೆ. ಇಂತಹ ಸನ್ನಿವೇಶಗಳಲ್ಲಿ ಪತ್ರಕರ್ತನಾದವ ಕೈಗೊಳ್ಳಬಹುದಾದ ಸಮರೋಪಾದಿಯ ಸುದ್ದಿ ನಿರ್ಣಯ-ನಿರ್ವಹಣೆಯ ಜವಾಬ್ದಾರಿಯುತ ಪಾತ್ರಗಳ ಬಗ್ಗೆ ಪತ್ರಕರ್ತ ತಳೆಯಬಹುದಾದ ಅಂತಿಮ ನಿರ್ಣಯಗಳು ಮಹತ್ತರವಾದುದು. ಈ ನಿಟ್ಟಿನಲ್ಲಿ ಹಿರಿಯ ತಲೆಮಾರಿನ ಮಾರ್ಗದರ್ಶನಗಳು ನಮ್ಮನ್ನು ಮುನ್ನಡೆಸುತ್ತದೆ ಎಂದರು. ನಾಂಗಿ ಮಾಸ್ತರರ ನೆನಪಿಸುವಿಕೆಯನ್ನು ಇಂತಹ ಪ್ರಯತ್ನಗಳು ಸದಾ ಹಸಿರಾಗಿಸುತ್ತದೆ ಎಂದರು.
ಕುಂಬಳೆ ಗ್ರಾ.ಪಂ. ಅಧ್ಯಕ್ಷೆ ಯು.ಪಿ ತಾಹಿರಾ ಯೂಸುಫ್ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕಲಿಕೆಯಲ್ಲಿ ಗಮನಾರ್ಹ ಸಾಧನೆ ಮೆರೆದ ಪ್ರತಿಭಾನ್ವಿತರು ನಮ್ಮಲ್ಲಿದ್ದರೂ ಆಸಕ್ತಿಯ ಅಧ್ಯಯನ ಮುಂದುವರಿಸಲು ವ್ಯವಸ್ಥೆಗಳ ಕೊರತೆ ಇದೆ. ನಮ್ಮ ಬುದ್ದಿಮತ್ತೆಗೆ ಮೇವು ನೀಡುವ ಸಕಾರಾತ್ಮಕ ಬೆಳವಣಿಗೆಗೆ ಪೂರಕ ವ್ಯವಸ್ಥೆಗಳು ಇಲ್ಲದಿರುವುದು ನಮ್ಮ ಕೊರತೆಯಾಗಿದ್ದು, ಈ ಕಾರಣದಿಂದ ಹುಟ್ಟೂರು ಬಿಟ್ಟು ಬೇರೆಡೆ ವಲಸೆ ಹೋಗುವ ಸ್ಥಿತಿ ನಿರ್ಮಾಣವಾಯಿತು. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರ ಪ್ರಯತ್ನಿಸುತ್ತಿದ್ದರೂ, ಅದು ನೀಡುವ ಬೆಳಕು ಕತ್ತಲನ್ನು ಹೋಗಲಾಡಿಸುವಲ್ಲಿ ಇನ್ನಷ್ಟು ಪ್ರಭೆ ಬೀರಬೇಕಿದೆ ಎಂದರು.
ಉದ್ಯಮಿ ಮಹಮ್ಮದಾಲಿ ನಾಂಗಿ, ಪ್ರೆಸ್ ಪೋರಂ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ, ಕೆಜೆಯು ಜಿಲ್ಲಾ ಅ|ಧ್ಯಕ್ಷ ಲತೀಫ್ ಉಳುವಾರ್, ಪ್ರೆಸ್ ಪೋರಂ ಮಾಜಿ ಅ|ಧ್ಯಕ್ಷ ಕೆ.ಸುರೇಂದ್ರನ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.

