ನವದೆಹಲಿ: ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಕೇಂದ್ರ ಸರ್ಕಾರ ಭಾನುವಾರ ಗರ್ಭಿಣಿಯರು ಮತ್ತು ದೈಹಿಕ ವಿಕಲಾಂಗ ಉದ್ಯೋಗಿಗಳಿಗೆ ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆಯ ಹಿನ್ನೆಲೆಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ(ಡಿಒಪಿಟಿ) ಹೊರಡಿಸಿದ ಹೊಸ ಮಾರ್ಗಸೂಚಿಗಳ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, “ಗರ್ಭಿಣಿ ಮಹಿಳೆಯರು ಮತ್ತು ‘ದಿವ್ಯಾಂಗ್’(ವಿಕಲಚೇತನ) ಉದ್ಯೋಗಿಗಳಿಗೆ ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ ಎಂದರು.
ಆದಾಗ್ಯೂ, ಅವರು ಮನೆಯಿಂದಲೇ ಕೆಲಸ ಮಾಡಬೇಕಾಗುತ್ತದೆ. ಕಂಟೈನ್‌ಮೆಂಟ್ ವಲಯಗಳಲ್ಲಿ ವಾಸಿಸುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಡಿನೋಟಿಫೈ ಮಾಡುವವರೆಗೆ ಕಚೇರಿಗೆ ಬರುವುದರಿಂದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಧೀನ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿರುವ ಸರ್ಕಾರಿ ಅಧಿಕಾರಿಗಳ ದೈಹಿಕ ಹಾಜರಾತಿಯನ್ನು ಶೇಕಡಾ 50ಕ್ಕೆ ಸೀಮಿತಗೊಳಿಸಲಾಗಿದೆ ಮತ್ತು ಉಳಿದ ಶೇಕಡಾ 50 ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.
ಸಂಬಂಧಪಟ್ಟ ಎಲ್ಲಾ ಇಲಾಖೆಗಳು ರೋಸ್ಟರ್ ಸಿದ್ಧಪಡಿಸುತ್ತವೆ. ಕಚೇರಿಗೆ ಹಾಜರಾಗದ ಮತ್ತು ಮನೆಯಿಂದಲೇ ಕೆಲಸ ಮಾಡುತ್ತಿರುವ ಅಧಿಕಾರಿಗಳು ಅಥವಾ ಸಿಬ್ಬಂದಿ ಎಲ್ಲಾ ಸಮಯದಲ್ಲೂ ದೂರವಾಣಿ ಮತ್ತು ಇತರ ಎಲೆಕ್ಟ್ರಾನಿಕ್ ಸಂವಹನ ವಿಧಾನಗಳಲ್ಲಿ ಲಭ್ಯವಿರುತ್ತಾರೆ" ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

